ಕರ್ನಾಟಕ

karnataka

ETV Bharat / state

ಹಳೆ ಮೈಸೂರು: ಕಾಂಗ್ರೆಸ್ ಜೆಡಿಎಸ್ ಬಲಿಷ್ಠತೆ ಮುಂದೆ ಮಂಕಾದ ಬಿಜೆಪಿ - ಬಿಜೆಪಿಗೆ ಹಿನ್ನೆಡೆ

ಹಳೆ ಮೈಸೂರು ಭಾಗದಲ್ಲಿ ಜಿ.ಟಿ ದೇವೇಗೌಡ ಸೇರಿದಂತೆ ಜೆಡಿಎಸ್​ ಹಾಗೂ ಕಾಂಗ್ರೆಸ್​ನ ಪ್ರಬಲ ನಾಯಕರನ್ನು ಸೆಳೆಯುವ ಬಿಜೆಪಿ ಯತ್ನಕ್ಕೆ ಆರಂಭದಲ್ಲೇ ಹಿನ್ನೆಡೆಯಾಗಿದೆ. ಜೆಡಿಎಸ್ ನ ಜಿ.ಟಿ ದೇವೇಗೌಡ ಅದೇ ಪಕ್ಷದಲ್ಲಿ ಉಳಿಯಲು ನಿರ್ಧಾರ ಮಾಡಿದ್ದು, ಮೈಸೂರು ಭಾಗದಲ್ಲಿ ಬಿಜೆಪಿಗೆ ಜಯ ತಂದುಕೊಡುವ ಸ್ಥಳೀಯ ನಾಯಕರ ಕೊರತೆ ಉಂಟಾಗಿದೆ.

Mysore
ಮೈಸೂರು

By

Published : Oct 29, 2022, 4:50 PM IST

ಮೈಸೂರು: ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಅತಿ ಹೆಚ್ಚು ಸ್ಥಾನ ಪಡೆಯುವ ತಂತ್ರ ಹೆಣೆದಿದ್ದ ಬಿಜೆಪಿಗೆ ಜಿ.ಟಿ ದೇವೇಗೌಡ ಜೆಡಿಎಸ್​​ನಲ್ಲೇ ಉಳಿದಿರುವುದು ಭಾರಿ ಹಿನ್ನಡೆ ತಂದಿದೆ. ಈಗ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪ್ರಬಲ ನಾಯಕರು ಇರುವುದರಿಂದ ಸದ್ಯಕ್ಕೆ ಬಿಜೆಪಿ ಮಂಕಾಗಿದೆ.

ಪ್ರಮುಖ ನಾಯಕರನ್ನು ಸೆಳೆಯಲು ಟಾಸ್ಕ್: 2023ಕ್ಕೆ ಹಳೆ ಮೈಸೂರು ಭಾಗವಾದ ಮೈಸೂರು ಜಿಲ್ಲೆ, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಮಡಿಕೇರಿ ಭಾಗದ ಸುಮಾರು 30ಕ್ಕೂ ಹೆಚ್ಚು ಸ್ಥಾನಗಳಲ್ಲಿ ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಈ ಭಾಗದ ಪ್ರಮುಖ ನಾಯಕರನ್ನು ಬಿಜೆಪಿಗೆ ಸೆಳೆಯುವಂತೆ ಟಾಸ್ಕ್ ನೀಡಿತ್ತು.

ಅದರಂತೆ ಮೈಸೂರು ಭಾಗದಲ್ಲಿ ಜಿ.ಟಿ ದೇವೇಗೌಡ ಸೇರಿದಂತೆ ಜೆಡಿಎಸ್​ ಹಾಗೂ ಕಾಂಗ್ರೆಸ್​ನ ಪ್ರಬಲ ನಾಯಕರನ್ನು ಸೆಳೆಯುವ ಬಿಜೆಪಿ ಯತ್ನಕ್ಕೆ ಆರಂಭದಲ್ಲೇ ಹಿನ್ನೆಡೆಯಾಗಿದೆ. ಜೆಡಿಎಸ್ ನ ಜಿ.ಟಿ ದೇವೇಗೌಡ ಅದೇ ಪಕ್ಷದಲ್ಲಿ ಉಳಿಯಲು ನಿರ್ಧಾರ ಮಾಡಿದ್ದು, ಮೈಸೂರು ಭಾಗದಲ್ಲಿ ಬಿಜೆಪಿಗೆ ಜಯ ತಂದುಕೊಡುವ ಸ್ಥಳೀಯ ನಾಯಕರ ಕೊರತೆ ಉಂಟಾಗಿದೆ. ಇಲ್ಲಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್ ಯಡಿಯೂರಪ್ಪ ಅವರ ನಾಮ ಬಲವೇ ಈಗ ಮುಂದಿನ ಚುನಾವಣೆ ಅಭ್ಯರ್ಥಿ ಗೆಲುವಿಗೆ ಮತ ತಂದುಕೊಡುವ ಶಕ್ತಿಯಾಗಿದೆ.

ಸಿದ್ದರಾಮಯ್ಯ

ಪ್ರಾಬಲ್ಯ ಉಳಿಸಿಕೊಂಡ ಜೆಡಿಎಸ್:ಕಳೆದ 3 ವರ್ಷಗಳಿಂದ ಜಿ.ಟಿ ದೇವೇಗೌಡ ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇವರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡಿತ್ತು. ಈ ನಡುವೆ ಕಾಂಗ್ರೆಸ್ ಸೇರುವ ಬಗ್ಗೆ ಜಿಟಿಡಿ ಒಲವು ಹೊಂದಿದ್ದರು. ಆದರೆ ತಮ್ಮ ಪುತ್ರ ಹರೀಶ್ ಗೌಡ ಅವರ ರಾಜಕೀಯ ಭವಿಷ್ಯಕ್ಕಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ರಾಜಕೀಯ ರಣನೀತಿಗೆ ಜಿಟಿಡಿ ಜೆಡಿಎಸ್​ನಲ್ಲೇ ಉಳಿಯುವಂತೆ ಮಾಡಿದೆ. ಅವರನ್ನು ಮೈಸೂರು ಜಿಲ್ಲೆಯ ಉಸ್ತುವರಿಯನ್ನಾಗಿ ಮಾಡಲಾಗಿದೆ. ಮೈಸೂರು ಜಿಲ್ಲೆಯ ಗೆಲುವಿಗೆ ಅವರ ಲೆಕ್ಕಾಚಾರ ಕೆಲಸ ಮಾಡಬಹುದು.

ಇದನ್ನೂ ಓದಿ:ದಾರಿ ಸುಗಮವಾಯಿತು‌, 2023ಕ್ಕೆ ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ನಮ್ಮ 'ಕೈ'ಗೆ ಅಧಿಕಾರ; ಸಿದ್ದರಾಮಯ್ಯ ಭವಿಷ್ಯ

ಇನ್ನು, ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿಯಿದ್ದು, ಈ ಭಾಗದಲ್ಲಿ ಗ್ರಾಮಾಂತರ ಮಟ್ಟದಲ್ಲಿ ಬಿಜೆಪಿ ಇನ್ನು ಬಲಿಷ್ಠವಾಗಿಲ್ಲ. ಆದರೆ ಮಡಿಕೇರಿಯಲ್ಲಿ ಬಿಜೆಪಿ ಪ್ರಬಲವಾಗಿದೆ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಈ ನಡುವೆ ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆಯುವ ಬಿಜೆಪಿ ಪ್ರಯತ್ನಕ್ಕೆ ಆರಂಭದಲ್ಲೇ ಅಭ್ಯರ್ಥಿಗಳ ಕೊರತೆಯುಂಟಾಗಿದೆ.

ಜೆಡಿಎಸ್ ನಾಯಕರು..

ಕಾಂಗ್ರೆಸ್ ಪ್ರಾಬಲ್ಯ: ಭಾರತ್ ಜೋಡೋ ಯಾತ್ರೆ ನಂತರ ಮುಂದಿನ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಅತಿ ಹೆಚ್ಜು ಸ್ಥಾನ ಗಳಿಸಲು ಈ ಭಾಗದ ಮುಖಂಡರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಧ್ರುವ ನಾರಾಯಣ್, ಹೆಚ್.ಸಿ ಮಹದೇವಪ್ಪ ಸೇರಿದಂತೆ ಹಲವು ನಾಯಕರು ಈ ಭಾಗದಲ್ಲಿ ಹೆಚ್ಚು ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಇದರ ಅಂಗವಾಗಿ ಮುಂದಿನ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ.

ಕಾಂಗ್ರೆಸ್​​ ನಾಯಕರು

ಆ ಮೂಲಕ ಈ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲು ತಂತ್ರಗಾರಿಕೆ ರೂಪಿಸಿದೆ. ಹೆಚ್ಚು ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಬಹುಮತ ಪಡೆದರೆ ಮುಖ್ಯಮಂತ್ರಿ ಗಾದಿಯ ದಾಳ ಉರುಳಿಸಲು ಸಿದ್ದರಾಮಯ್ಯ ಆಪ್ತರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಬಿಜೆಪಿಗೆ ಹಿನ್ನೆಡೆ:ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆಯುವ ಬಿಜೆಪಿ ಕನಸಿಗೆ ಈಗಾಗಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂಬ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿಕೆ ಹಿನ್ನೆಡೆಯುಂಟು ಮಾಡಿದೆ. ಇದು ಹಳೆ ಮೈಸೂರಿನ ಹಿಂದುಳಿದ ವರ್ಗದವರ ಮತಗಳ ಮೇಲೆ ಪ್ರಭಾವ ಬೀರಲಿದೆ.

ಪ್ರಬಲ ನಾಯಕರ ಕೊರತೆ:ಈಗ ಹಾಲಿ ಶಾಸಕರು ಸಹ ಗೆಲ್ಲಲು ಮತ್ತೆ ಶ್ರಮ ಪಡಬೇಕು. ಮುಖ್ಯವಾಗಿ ಹಳೆ ಮೈಸೂರು ಭಾಗದಲ್ಲಿ ಪ್ರಬಲ ಬಿಜೆಪಿ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಮಂಡ್ಯದ ಕೆ.ಆರ್ ಪೇಟೆಯಿಂದ ಗೆದ್ದ ಹಾಲಿ ಶಾಸಕ ಹಾಗೂ ಸಚಿವ ನಾರಾಯಣ ಗೌಡ, ಮೈಸೂರು ಜಿಲ್ಲೆಯ ಕೆ.ಆರ್ ಕ್ಷೇತ್ರದ ಎಸ್​ ಎ ರಾಮದಾಸ್, ಚಾಮರಾಜ ಕ್ಷೇತ್ರದ ನಾಗೇಂದ್ರ ಹಾಗೂ ನಂಜನಗೂಡು ಕ್ಷೇತ್ರದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಪ್ರಯತ್ನ ಮಾಡುತ್ತಾರೆ ಹೊರತು, ಬೇರೆ ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ನಾಯಕರಲ್ಲ. ಆದರೆ ಚುನಾವಣೆಗೆ ಇನ್ನು 6 ತಿಂಗಳಿದ್ದು, ರಾಜ್ಯ ರಾಜಕೀಯದಲ್ಲಿ ಏನಾದರೂ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ.

ಇದನ್ನೂ ಓದಿ:2023 ರ ಚುನಾವಣೆ ನನ್ನ ಜೀವನದ ಕೊನೆಯ ಹೋರಾಟ: ಹೆಚ್​ಡಿಕೆ

ABOUT THE AUTHOR

...view details