ಮೈಸೂರು: ರಾಜ್ಯ ಸರ್ಕಾರ ಆತುರಾತುರವಾಗಿ ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಮಾಡಿ, ಅಲ್ಪಸಂಖ್ಯಾತ ಮುಸ್ಲಿಮರ ಮೀಸಲಾತಿ ಕಡಿತಗೊಳಿಸಿ ಸಮಾಜ ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಚಾಮುಂಡಿ ಬೆಟ್ಟದಲ್ಲಿ, ನಾಡ ಅಧಿದೇವತೆ ಚಾಮುಂಡೇಶ್ವರಿಗೆ, ಪಂಚರತ್ನ ರಥಯಾತ್ರೆಯ ಸಮಾರೋಪಕ್ಕೂ ಮುನ್ನ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ವರ್ಷದ ನವೆಂಬರ್ನಲ್ಲಿ ಪಂಚರತ್ನ ಕಾರ್ಯಕ್ರಮಕ್ಕೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಕೋಲಾರ ಜಿಲ್ಲೆಯಿಂದ ಜೆಡಿಎಸ್ ಪಂಚರತ್ನ ಯಾತ್ರೆ ಆರಂಭ ಮಾಡಲಾಗಿತ್ತು. ಅದರ ಸಮಾರೋಪ ಸಮಾರಂಭ ಮೈಸೂರಿನಲ್ಲಿ ನಡೆಯುತ್ತಿದ್ದು. ಆ ಹಿನ್ನೆಲೆಯಲ್ಲಿ ಇಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಇದು ಐತಿಹಾಸಿಕ ಸಮಾರಂಭ ಆಗಲಿದೆ. ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷವನ್ನು ಮುಗಿಸಲು ಹುನ್ನಾರ ಮಾಡುತ್ತಿವೆ. ಇದಕ್ಕೆ ಈ ಸಮಾರಂಭ ಉತ್ತರ ನೀಡಲಿದೆ ಎಂದು ತಿಳಿಸಿದರು.
ಮೀಸಲಾತಿಯಲ್ಲಿ ಸ್ಪಷ್ಟತೆ ಇಲ್ಲ-ಹೆಚ್ಡಿಕೆ: ರಾಜ್ಯ ಸರ್ಕಾರ ಆತುರಾತುರವಾಗಿ ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಮಾಡಿರುವುದು ಸರಿಯಾದ ಕ್ರಮ ಅಲ್ಲ.ಇದರೊಂದಿಗೆ ಮುಸ್ಲಿಮರ ಮೀಸಲಾತಿಯಲ್ಲಿ ಕಡಿತ ಮಾಡುವ ಬಗ್ಗೆ ಯಾವುದೇ ಸಮಿತಿ ರಚನೆ ಆಗಿಲ್ಲ. ಯಾವುದೇ ಸಮಿತಿ ವರದಿ ನೀಡಿಲ್ಲ. ಆದರೂ ಮುಸ್ಲಿಮರ ಮೀಸಲಾತಿ ಪ್ರಮಾಣ ಕಡಿತ ಮಾಡಿ, ಒಕ್ಕಲಿಗರ ಹಾಗೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚು ಮಾಡಿರುವುದರಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಇದೆಲ್ಲ ಹುಡುಗಾಟಿಕೆಯ ತೀರ್ಮಾನಗಳು, ಇದು ಅನುಷ್ಠಾನಕ್ಕೆ ಬರುವುದಿಲ್ಲ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.
ರೋಡ್ ಶೋ ರದ್ದು: ಪಂಚರತ್ನ ರಥಯಾತ್ರೆ ಸಮಾರಂಭಕ್ಕೂ ಮುನ್ನ ಹೆಚ್ ಡಿ. ದೇವೇಗೌಡರು ಮೈಸೂರು ನಗರದಲ್ಲಿ ರೋಡ್ ಶೋ ನಡೆಸಲು ಪ್ಲಾನ್ ಮಾಡಲಾಗಿತ್ತು. ಆದರೆ, ವೈದ್ಯರ ಸಲಹೆ ಹಿನ್ನೆಲೆಯಲ್ಲಿ ದೇವೇಗೌಡರ ರೋಡ್ ಶೋ ರದ್ದು ಮಾಡಲಾಗಿದೆ. ಕುಮಾರಸ್ವಾಮಿಯವರು ಸಹ ಸಮಾರೋಪಕ್ಕೆ ಮುನ್ನ ರೋಡ್ ಶೋ ನಡೆಸುವ ತೀರ್ಮಾನ ಮಾಡಿದ್ದರು. ಆದರೆ, ಸಮಾರೋಪಕ್ಕೆ ರಾಜ್ಯದ ವಿವಿಧ ಕಡೆಯಿಂದ ಲಕ್ಷಾಂತರ ಜನ ವಾಹನಗಳಲ್ಲಿ ಆಗಮಿಸುವ ಹಿನ್ನೆಲೆ ರೋಡ್ ಶೋ ನಡೆಸಿದರೆ ವಾಹನ ದಟ್ಟಣೆ ಉಂಟಾಗುವ ಕಾರಣ, ರೋಡ್ ಶೋವನ್ನು ರದ್ದು ಮಾಡಲಾಗಿದೆ ಎಂದು ಸ್ವತಃ ಕುಮಾರಸ್ವಾಮಿ ತಿಳಿಸಿದರು.