ಮೈಸೂರು:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾವೇರಿ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡದೇ, ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಕಾರ್ಯಕ್ರಮಯೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ನಿರಾಕರಣೆ ಕುರಿತಂತೆ ಪ್ರತಿಕ್ರಿಯಿಸಿದರು. ನಮ್ಮ ರಾಜ್ಯದ ರೈತರ ಹಿತ ನಮಗೆ ಮುಖ್ಯ. ಇಂದು ಸಂಜೆ ಕ್ಯಾಬಿನೆಟ್ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಎಲ್ಲರೂ ಒಂದು ತೀರ್ಮಾನಕ್ಕೆ ಬರುತ್ತೇವೆ. ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡದೇ, ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಕಾವೇರಿ ವಿಚಾರವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಇಲ್ಲ ನಿಫಾ ವೈರಸ್ ಭೀತಿ:ರಾಜ್ಯದಲ್ಲಿ ನಿಫಾ ವೈರಸ್ ಭೀತಿ ಇಲ್ಲ. ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಯಾವುದೇ ಪ್ರದೇಶದಲ್ಲೂ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ನೆರೆಯ ರಾಜ್ಯ ಕೇರಳದಲ್ಲಿ ಸೆಪ್ಟೆಂಬರ್ 15ರಿಂದ ಇಲ್ಲಿಯವರೆಗೆ ಯಾವುದೇ ನಿಫಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಯಾವುದೇ ಹೊಸ ನಿಫಾ ವೈರಸ್ ಪ್ರಕರಣ ಪತ್ತೆ ಆಗಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ರಾಜ್ಯದಲ್ಲಿ ವೈರಸ್ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. ಮೂರು ಡಿಸಿಎಂ ಹುದ್ದೆ ಬಗ್ಗೆ ನಡೆಯುತ್ತಿರುವ ಚರ್ಚೆ ಕುರಿತಾಗಿ ಕೇಳಿದ ಪ್ರಶ್ನೆ ಬಗ್ಗೆ ಉತ್ತರಿಸಿದ ಸಚಿವರು, ''ಈ ವಿಚಾರವನ್ನು ಮಾಧ್ಯಮದವರು ಮಾತ್ರ ಚರ್ಚೆ ಮಾಡುತ್ತಿದ್ದಾರೆ'' ಎಂದರು.