ಮೈಸೂರು:ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಇಟ್ಟಿದ್ದಾರೆ. ಆರ್ಎಸ್ಎಸ್ ಸುಳ್ಳಿನ ಫ್ಯಾಕ್ಟರಿಯ ರೂವಾರಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ನಾಯಕರು ಹೇಳಿದಂತೆ ಬಿಜೆಪಿ ನಾಯಕರು ಕೇಳುತ್ತಿದ್ದಾರೆ. ಆರ್ಎಸ್ಎಸ್ ನವರು ನನ್ನನ್ನು ಟಾರ್ಗೆಟ್ ಮಾಡುವಂತೆ ಬಿಜೆಪಿಯವರಿಗೆ ಹೇಳಿಕೊಡುತ್ತಿದ್ದಾರೆ ಎಂದು ಹರಿಹಾಯ್ದರು.
ಸಚಿವ ಬಿ ಶ್ರೀರಾಮುಲು ಕೂಡಾ ಆರ್ಎಸ್ಎಸ್ ನವರು ಹೇಳಿಕೊಟ್ಟಿದ್ದನ್ನೇ ಹೇಳ್ತಿದಾನೆ. ನಳಿನ್ ಕುಮಾರ್ ಕಟೀಲ್ ಯಾವುದೇ ಹೋರಾಟ ಮಾಡಿದವನಲ್ಲ. ಅವನೊಬ್ಬ ಜೋಕರ್ ಇದ್ದಂತೆ ಎಂದು ಏಕವಚನದಲ್ಲೇ ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಶೇ.40 ಸರ್ಕಾರ ಎಂಬುದು ಎಂದೋ ಸಾಬೀತಾಗಿದೆ. ಈ ಕುರಿತು ಹಲವಾರು ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಬಿಜೆಪಿಯವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಇದೀಗ ಪತ್ರಕರ್ತರಿಗೇ ಗಿಫ್ಟ್ ಕೊಟ್ಟಿದ್ದಾರೆ. ಇವರ ಹಗರಣಗಳನ್ನು ಬಿಂಬಿಸದಂತೆ ಕೋರಲು ಪತ್ರಕರ್ತರಿಗೆ ಗಿಫ್ಟ್ ರೂಪದಲ್ಲಿ ಹಣ ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಪತ್ರಕರ್ತರಿಗೆ ಹಂಚಿಕೆಯಾಗಿರುವ ಹಣದ ಮೂಲವನ್ನು ಪತ್ತೆ ಹಚ್ಚಬೇಕು. ಬಿಜೆಪಿಯವರು ಮಹಾನ್ ಭ್ರಷ್ಟರು, ಭಂಡರಾಗಿದ್ದು, ಅವರ ತಪ್ಪನ್ನೂ ಸಮರ್ಥಿಸಿಕೊಳ್ಳುವಂತಹ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದರು.
ಪರಿಶಿಷ್ಟ ಜಾತಿಗೆ ಮೀಸಲಾತಿ ಹೆಚ್ಚಳವಾಗಿ, ರಾಜ್ಯ ಸರ್ಕಾರ ಕಾಯ್ದೆ ಮಾಡುವ ಬದಲು ಸುಗ್ರೀವಾಜ್ಞೆ ಹೊರಡಿಸಿದೆ. 1992ರಲ್ಲಿ 9 ನ್ಯಾಯಾಧೀಶರ ನೇತೃತ್ವ ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಅದರನ್ವಯ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಮೀರಬಾರದು. ಈಗ ಬಸವರಾಜ ಬೊಮ್ಮಾಯಿ ಸರ್ಕಾರ ಶೇ.5ರಷ್ಟು ಮೀಸಲಾತಿ ಹೆಚ್ಚಿಸಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಅಂದರೆ ಶೇ.66ರಷ್ಟು ಆಗುತ್ತೆ. ಇದಕ್ಕೆ ಕಾನೂನು ಮಾನ್ಯತೆ ಇರಲ್ಲ. 9ನೇ ಶೆಡ್ಯೂಲ್‌ಗೆ ಸೇರಿಸದೇ ಇದ್ದರೆ ಮೀಸಲಾತಿಗೆ ರಕ್ಷಣೆ ಇರಲ್ಲ ಎಂದರು.
ಆದ್ದರಿಂದಲೇ ನಾನು ವಿಶೇಷ ಅಧಿವೇಶನ ಕರೆದು ಕಾಯ್ದೆ ಮಾಡಿ ಅಂತ ಒತ್ತಾಯ ಮಾಡಿದ್ದೆ. ಡಬಲ್ ಇಂಜಿನ್ ಸರ್ಕಾರ ಅಂತ ಹೇಳಿಕೊಳ್ಳುವ ಬಿಜೆಪಿಯವರು ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರವನ್ನು ಆಗ್ರಹ ಮಾಡಲಿ ಎಂದು ಸಲಹೆ ನೀಡಿದರು.
ಪರಿಶಿಷ್ಟ ಜಾತಿಗೆ ಮೀಸಲಾತಿ ಹೆಚ್ಚಳಕ್ಕೆ ನ್ಯಾ. ನಾಗಮೋಹನ್ ದಾಸ್ ಸಮಿತಿ ರಚಿಸಿದ್ದು ಮೈತ್ರಿ ಸರ್ಕಾರ. ಆಗ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದವರು ಪ್ರಿಯಾಂಕ್ ಖರ್ಗೆ. ಅವನಿಗೆ ಹೇಳಿ ಸಮಿತಿ ರಚಿಸಿದ್ದು ನಾವು. ನ್ಯಾ.ನಾಗಮೋಹನ್ ದಾಸ್ ಸಮಿತಿ 20-07-2020ರಲ್ಲಿ, ಅಂದರೆ ಎರಡು ವರ್ಷದ ನಂತರ ಜಾರಿಗೆ ತರಲು ಒಪ್ಪಿದ್ದಾರೆ ಎಂದರು.
ಶ್ರೀರಾಮುಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ 24 ಗಂಟೆಯಲ್ಲಿ ಮೀಸಲಾತಿ ಹೆಚ್ಚಳ ಮಾಡುತ್ತೇವೆ, ರಕ್ತದಲ್ಲಿ ಬರೆದುಕೊಡುತ್ತೇನೆ ಅಂತ ಹೇಳಿದ್ದರು. ವಾಲ್ಮೀಕಿ ಸ್ವಾಮೀಜಿ ಧರಣಿ ಕುಳಿತುಕೊಳ್ಳುವರೆಗೂ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಸಂವಿಧಾನಕ್ಕೆ 73, 74ರ ತಿದ್ದುಪಡಿ ತಂದು ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್. ಪಿ ವಿ ನರಸಿಂಹರಾವ್, ರಾಜೀವ್ ಗಾಂಧಿ ಪ್ರಯತ್ನದ ಫಲವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಕ್ಕಿದೆ. ಇದನ್ನು ವಿರೋಧಿಸಿ ಬಿಜೆಪಿಯ ಅಂದಿನ ರಾಜ್ಯಸಭಾ ಸದಸ್ಯ ರಾಮಾ ಜೋಯಿಷಿ ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಈಗ ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಮಾತನಾಡುವ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಎಲ್ಲ ಎಲ್ಲಿಗೆ ಹೋಗಿದ್ದರು ಎಂದು ಕಿಡಿಕಾರಿದರು.
ಬಸವರಾಜ ಬೊಮ್ಮಾಯಿ ಬಿಜೆಪಿ ಸೇರಿದ್ದೇ 2008ರಲ್ಲಿ, ಅಲ್ಲಿವರೆಗೂ ಜೆಡಿಯುನಲ್ಲಿದ್ದರು. ಮೀಸಲಾತಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಮೀಸಲಾತಿ ಹೆಚ್ಚಳದ ಕ್ರೆಡಿಟ್ ವಾರ್ ವಿಚಾರವಾಗಿ ಮಾತನಾಡಿ, ಮೀಸಲಾತಿ ಹೆಚ್ಚಳಕ್ಕೆ ನಾವೇ ಕಾರಣರು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಈಗ ತರಾತುರಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿರುವುದರ ಉದ್ದೇಶವೇನು? ಎಂಬುದು ಎಲ್ಲರಿಗೂ ಅರ್ಥವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ವಾಸ್ತವವಾಗಿ ಬಿಜೆಪಿಯವರು ಮೀಸಲಾತಿ ವಿರೋಧಿಗಳಾಗಿದ್ದಾರೆ. ಕೇವಲ ರಾಜಕೀಯ ಲಾಭಕ್ಕಾಗಿ ಮೀಸಲಾತಿ ಹೆಚ್ಚಳ ಮಾಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಈ ದೇಶಕ್ಕೆ ಇಂದಿರಾ ಗಾಂಧಿಯವರು ಅಪಾರ ಕೊಡುಗೆ ನೀಡಿದ್ದಾರೆ : ಡಿ ಕೆ ಶಿವಕುಮಾರ್ ಬಣ್ಣನೆ