ಮೈಸೂರು: ರಾಗಿಣಿ ವಿಚಾರದಲ್ಲಿ ಬಿಜೆಪಿ ಪಕ್ಷಕ್ಕೆ ಮುಜುಗರ ಯಾಕೆ ಆಗುತ್ತದೆ..? ರಾಗಿಣಿಗೆ ಪಕ್ಷ ಹೇಳಿತ್ತಾ? ಆದ್ದರಿಂದ ಪಕ್ಷಕ್ಕೆ ಯಾವುದೇ ಮುಜುಗರ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ರಾಗಿಣಿ ವಿಚಾರದಲ್ಲಿ ಬಿಜೆಪಿ ಪಕ್ಷಕ್ಕೆ ಯಾವುದೇ ಮುಜುಗರ ಇಲ್ಲ: ಎಸ್.ಟಿ.ಸೋಮಶೇಖರ್ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಇತ್ತೀಚೆಗೆ ರಾಗಿಣಿ ಬಿಜೆಪಿ ಪಕ್ಷವನ್ನು ಸೇರಿದ್ದರು. ಈಗ ಡ್ರಗ್ಸ್ ವಿಚಾರದಲ್ಲಿ ಸಿಕ್ಕಿಹಾಕಿಕೊಂಡಿರುವುದು ಪಕ್ಷಕ್ಕೆ ಮುಜುಗರ ಆಗುತ್ತದೆಯೇ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, ಯಾಕೆ ಮುಜುಗರ ಆಗುತ್ತದೆ? ರಾಗಿಣಿಗೆ ಪಕ್ಷ ಹೇಳಿತ್ತಾ? ಆದ್ದರಿಂದ ಈ ವಿಚಾರದಿಂದ ಪಕ್ಷಕ್ಕೆ ಮುಜುಗರ ಆಗುವುದಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎನ್ನುವುದು ಇಲ್ಲ. ಯಾರು ಡ್ರಗ್ಸ್ನಲ್ಲಿ ಶಾಮೀಲಾಗಿದ್ದಾರೆ ಅವರು ಯುವ ಜನಾಂಗಕ್ಕೆ ಒಂದು ಮೆಸೇಜ್ ಕೊಡಬೇಕಾಗಿತ್ತು. ಆದರೆ ಅವರೇ ಇದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಪಕ್ಷ ಇಲ್ಲ.
ಡ್ರಗ್ಸ್ನಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ನಾವೇ ಕ್ಯಾಬಿನೆಟ್ನಲ್ಲಿ ಹೇಳಿದ್ದೇವೆ. ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಬೇಕು. ಈ ಬಗ್ಗೆ ಮುಖ್ಯಮಂತ್ರಿಗಳೇ ನೇರವಾಗಿ ಗೃಹ ಮಂತ್ರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಮಾತನಾಡಿದ್ದಾರೆ. ಈ ಡ್ರಗ್ಸ್ ದಂಧೆ ಮುಂದುವರೆದರೆ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತದೆ. ಯುವ ಜನಾಂಗ ಹಾಳಾಗಬಾರದು ಎಂಬ ದೃಷ್ಟಿಯಿಂದ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಲು ಕ್ಯಾಬಿನೆಟ್ನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ನಾವೇ ಹೇಳಿದ್ದೇವು ಎಂದರು.
ಇನ್ನು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅಧಿಕಾರ ಕೊಟ್ಟಾಗ ಡ್ರಗ್ಸ್ ಕಂಟ್ರೋಲ್ ಮಾಡುವುದಕ್ಕೆ ಆಗಲಿಲ್ಲ. ಇದೀಗ ಮುಖ್ಯಮಂತ್ರಿಗಳು ಡ್ರಗ್ಸ್ ಮಟ್ಟ ಹಾಕಲು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಡ್ರಗ್ಸ್ ಹಣದಿಂದ ಸರ್ಕಾರ ತರುವ ದುರ್ಬುದ್ಧಿ ಬಿಜೆಪಿಗೆ ಇಲ್ಲ. ಅದರ ಅವಶ್ಯಕತೆ ಇಲ್ಲ. ಕುಮಾರಸ್ವಾಮಿ ಅವರಿಗೆ ಅಧಿಕಾರ ಇಲ್ಲ. ಅದಕ್ಕೆ ಈ ರೀತಿ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಸೆ. 8ಕ್ಕೆ ದಸರಾ ಉನ್ನತಮಟ್ಟದ ಸಭೆ:ಈ ಬಾರಿ ದಸರಾವನ್ನು ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ನೇತೃತ್ವದಲ್ಲಿ ಸೆ. 8ರಂದು ಬೆಂಗಳೂರಿನಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆಯಲಿದೆ. ಅಲ್ಲಿ ತೀರ್ಮಾನವಾದ ನಂತರ ಮೈಸೂರಿನಲ್ಲಿ ಮತ್ತೊಂದು ಸಭೆ ನಡೆಯಲಿದ್ದು, ಯಾವ ರೀತಿ ದಸರಾ ನಡೆಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಸರಳ ಮತ್ತು ಸಾಂಪ್ರದಾಯಿಕ ದಸರಾ ಬಗ್ಗೆಯೂ ಚರ್ಚೆ ನಡೆಯಲಿದೆ. ಎಲ್ಲಾ ತೀರ್ಮಾನಗಳು ಉನ್ನತಮಟ್ಟದ ಸಭೆಯ ನಂತರ ಗೊತ್ತಾಗಲಿದೆ ಎಂದು ಸಚಿವರು ತಿಳಿಸಿದರು.
ಇನ್ನು ಮೈಸೂರಿನಲ್ಲಿ ಡ್ರಗ್ಸ್ ಪ್ರಕರಣಗಳು ಪತ್ತೆಯಾದರೆ ಅದಕ್ಕೆ ಆಯಾ ವಲಯದ ಎಸಿಪಿಗಳು, ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳನ್ನು ಹೊಣೆಗಾರನ್ನಾಗಿ ಮಾಡಲಾಗುವುದು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭ ಮೌನೆಂಟೆನ್ ಪೋಲಿಸ್ ಆವರಣದಲ್ಲಿರುವ ಪಶು ಆಸ್ಪತ್ರೆಯ ಸ್ಥಳಾಂತರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.