ಮೈಸೂರು: ರಂಗಾಯಣದ ಮೂಲಕ ಶಾಂತಿ ಕದಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನ ಮಾಡಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದರು.
ಇಂದು ಕಾಂಗ್ರೆಸ್ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್ ಇತ್ತೀಚೆಗೆ ಮೈಸೂರು ರಂಗಾಯಣದಲ್ಲಿ ಪ್ರದರ್ಶನಗೊಂಡ ಸಾಂಬಾ ಶಿವ ಪ್ರಹಸನ ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ. ಶಿವಕುಮಾರ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವುದು ಖಂಡನೀಯ. ರಂಗಾಯಣದ ಮೂಲಕ ಬಿಜೆಪಿ ಸರ್ಕಾರ ಮೈಸೂರಿನಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ, ಎಂದು ಎಂ ಲಕ್ಷ್ಮಣ್ ಆರೋಪಿಸಿದರು.
ರಂಗಾಯಣದ ನಿರ್ದೇಶಕ ರೌಡಿ ತರ ವರ್ತಿಸುತ್ತಿದ್ದಾರೆ : ’’ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರೌಡಿ ರೀತಿ ವರ್ತನೆ ಮಾಡುತ್ತಿದ್ದು, ಅವರು ಟಿಪ್ಪು ನಿಜ ಕನಸುಗಳು ನಾಟಕದ ಮೂಲಕ ಶಾಂತಿ ಕದಡಲು ಯತ್ನಿಸಿದರು. ಈಗ ಸಾಂಬಾ ಶಿವ ಪ್ರಹಸನ ನಾಟಕದ ಮೂಲಕ ಕಾಂಗ್ರೆಸ್ ನಾಯಕರನ್ನು ಅವಹೇಳನ ಮಾಡಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಸಾಹಿತಿ ಎಸ್ ಎಲ್. ಬೈರಪ್ಪ ಹಾಗೂ ಮಾಸ್ಟರ್ ಮೈನ್ಡ್ ಪ್ರತಾಪ್ ಸಿಂಹ ಅವರನ್ನ ಮುಂದಿಟ್ಟುಕೊಂಡು ಶಾಂತಿ ಕದಡುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ, ಶೀಘ್ರವೇ ಮೈಸೂರಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ 10000 ಜನ ಸೇರಿಸಿ ಮುಂದಿನ ವಾರ ಬೃಹತ್ ಪ್ರತಿಭಟನೆಯನ್ನ ನಡೆಸಲಾಗುವುದು‘‘ ಎಂದು ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.