ಮೈಸೂರು: ಬಿಜೆಪಿ ಸರ್ಕಾರ ಒಳ್ಳೆಯ ಆಡಳಿತ ಕೊಡುವಲ್ಲಿ ವಿಫಲವಾಗಿದೆ ಎನ್ನುವುದಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವೇ ಉದಾಹರಣೆಯಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಆರ್.ದ್ರುವನಾರಾಯಣ್ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಪಕ್ಷದ ವತಿಯಿಂದ ಆರೋಗ್ಯ ಸಹಾಯವಾಣಿಗೆ ಅಧಿಕೃತ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಒಳ್ಳೆಯ ಆಡಳಿತ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಉತ್ತರವೆಂಬಂತೆ ಕಾಂಗ್ರೆಸ್ 7 ಸ್ಥಳೀಯ ಸಂಸ್ಥೆಗಳಲ್ಲಿ ಬಹುಮತ ಪಡೆದಿರುವುದೇ ಸಾಕ್ಷಿಯಾಗಿದೆ ಎಂದರು.
ಬಿಜೆಪಿ ಒಳ್ಳೆಯ ಆಡಳಿತ ಕೊಡುವಲ್ಲಿ ವಿಫಲವಾಗಿದೆ: ಆರ್.ದ್ರುವನಾರಾಯಣ್ ಮೈಸೂರು ಜಿಲ್ಲೆಯಲ್ಲಿ ಪ್ರತಿದಿನ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಜಿಲ್ಲಾಡಳಿತದ ವೈಫಲ್ಯವೇ ಮೂಲ ಕಾರಣವಾಗಿದೆ. ಕೋವಿಡ್ ನಿಯಂತ್ರಣ ಮಾಡಲು ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ನಿಂದ ಒಂದು ಕಡೆ ಜನ ಬಳಲುತ್ತಿದ್ದರೆ, ಕರ್ಫ್ಯೂನಿಂದ ಕೆಲಸವಿಲ್ಲದೆ ಜನರು ಹಸಿವಿನಿಂದ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಕಡಿಮೆ ಅಕ್ಕಿ ವಿತರಣೆ ಮಾಡುವುದು ಸರಿಯಲ್ಲ. 10 ಕೆಜಿ ಅಕ್ಕಿ ಕೊಡಬೇಕೆಂದು ಸೋಮವಾರ ಜಿಲ್ಲಾವಾರು ಪತ್ರ ಚಳುವಳಿ ನಡೆಸಲಾಗುವುದು ಎಂದರು.
ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾರಿಗೂ ಕೋವಿಡ್ ಲಸಿಕೆ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಏಕಾಏಕಿ ಸಂಜೆ ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ. ಇಲ್ಲಿ ಸಮನ್ವಯದ ಕೊರತೆ, ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಯಾವುದೇ ಕೆಲಸ ಮಾಡುತ್ತಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲನ್ನು ತರುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಂಸದರ ವಿರುದ್ಧ ಕಿಡಿಕಾರಿದರು.