ಮೈಸೂರು:ನಂಜನಗೂಡಿನಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿರುವ ವೇಳೆ ಯುವಕನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನ ಆರೋಗ್ಯವನ್ನು ಇಂದು ಬಿಜೆಪಿ ನಿಯೋಗ ವಿಚಾರಿಸಿತು. ಭಾನುವಾರ ರಾತ್ರಿ ನಿಂಗಣ್ಣ ಸರ್ಕಲ್ನಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಯುವಕರು, ಆ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಭಾರತ್ ಮಾತಾ ಕಿ ಜೈ ಎಂದು ಹೇಳಿದ ಕಾರಣಕ್ಕೆ, ಯುವಕ ಪ್ರಸಾದ್ ಎಂಬವನ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯ ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದ ಮಾಜಿ ಸಚಿವ ಅಶ್ವಥ್ ನಾರಾಯಣ್ ಮಾಧ್ಯಮಗಳ ಜೊತೆ ಮಾತನಾಡಿದರು.
ಯಾವುದೇ ವರ್ಗವನ್ನು ಭಯಪಡಿಸುವ ಕೆಲಸ ಆಗಬಾರದು:''ಈ ಘಟನೆಗೆ ಕಾರಣವೇನು ಎಂಬುದನ್ನು ತಿಳಿಯಲು ನಾವು ಬಂದಿದ್ದೇವೆ. ಹೊಸ ಸರ್ಕಾರ ಬಂದಿದೆ ಎಂದು ನಮ್ಮ ಕಾರ್ಯಕರ್ತರು ಭಯ ಪಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಜಯಭೇರಿ ಬಾರಿಸಿದೆ ಎಂದು ಕೆಲವರು ಹುಮ್ಮಸ್ಸಿನಿಂದ ಇದ್ದಾರೆ. ಹುಟ್ಟುಹಬ್ಬ ಆಚರಣೆ ವೇಳೆ ಗಲಾಟೆ ಆಗಿದೆ ಎಂಬುದು ಗೊತ್ತಾಗಿದೆ. ಭಾರತ್ ಮಾತಾ ಕಿ ಜೈ ಎಂದಿದಕ್ಕೆ ಚಾಕು ಇರಿತ ನಡೆದಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ವಸ್ತುಸ್ಥಿತಿ ಅರಿಯಲು ನಾವು ಬಂದಿದ್ದೇವೆ. ಯುವಕನ ಆರೋಗ್ಯ ಸ್ಥಿರವಾಗಿದೆ. ನಂಜನಗೂಡಿನ ನಿಂಗಣ್ಣ ಸರ್ಕಲ್ನಲ್ಲಿ ಎಲ್ಲ ರೀತಿಯ ಆಚರಣೆಗಳು ನಡೆಯುತ್ತವೆ. ಇಂತಹ ಘಟನೆಗಳು ಮರುಕಳಿಸುವುದು ಸರಿಯಲ್ಲ. ಯಾವುದೇ ವರ್ಗವನ್ನು ಭಯಪಡಿಸುವ ಕೆಲಸ ಆಗಬಾರದು ಎಂದು ಹೇಳಿದರು. ಚುನಾವಣೆಯಲ್ಲಿ ಸೋತ ನಂತರ ನಮ್ಮ ಕಾರ್ಯಕರ್ತರು ಎದೆಗುಂದಬಾರದು. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತೇವೆ. ಈ ಘಟನೆ ಬಗ್ಗೆ ವರಿಷ್ಠರಿಗೆ ವರದಿ ಕೊಡುವ ಕೆಲಸ ಮಾಡುತ್ತೇವೆ. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎರಡು ಕೋಮಿನ ಮುಖಂಡರ ಜೊತೆ ಶಾಂತಿ ಸಭೆ ನಡೆಸುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.