ಮೈಸೂರು:ಬಿಲ್ಕಿಸ್ ಬಾನು ಪ್ರಕರಣದ ಅತ್ಯಾಚಾರಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿರುವುದು ಗುಜರಾತ್ ಸರ್ಕಾರದ ನಿರ್ಲಜ್ಜ ಕ್ರಮವಾಗಿದ್ದು, ಎರಡು ದಶಕಗಳ ಗಾಯವನ್ನು ಇನ್ನೂ ಹಸಿಯಾಗಿಸಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಕಿಡಿಕಾರಿದ್ದಾರೆ.
ನಗರದ ಟೌನ್‌ಹಾಲ್ ಮುಂಭಾಗದಲ್ಲಿನ ಅಂಬೇಡ್ಕರ್ ಪುತ್ಥಳಿ ಎದುರು ಇಂದು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ವಿವಿಧ ಸಂಘಟನೆಗಳ ಜೊತೆಗೂಡಿ ಬಿಲ್ಕಿಸ್ ಬಾನು ಅತ್ಯಾಚಾರಿಗಳ ಅವಧಿಪೂರ್ಣ ಬಿಡುಗಡೆಯನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಗುಜರಾತ್ ಗಲಭೆಯಲ್ಲಿ ದಾಳಿಕೋರರಿಂದ ತಪ್ಪಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದ ಕುಟುಂಬವನ್ನು ಅಡ್ಡಗಟ್ಟಿ ಮೂರು ವರ್ಷದ ಹಸುಳೆ ಸೇರಿದಂತೆ 12 ಜನರನ್ನು ಕೊಂದು ಬಿಲ್ಕಿಸ್ ಬಾನು ಅವರ ಮೇಲೆ 11 ಜನರು ಅತ್ಯಾಚಾರವೆಸಗಿದ್ದು ಸನ್ನಡತೆಯೇ ಅಥವಾ ಬಿಡುಗಡೆಯಾದ ನಂತರ ಇವರಿಗೆ ಹಾರ ಹಾಕಿ ಸ್ವಾಗತಿಸಿದ ಕ್ರಮ ಸನ್ನಡತೆಯೇ?. ಇದು ನನ್ನ ದೇಶ. ಇಂತಹ ಕೃತ್ಯಗಳಲ್ಲಿ ಭಾಗಿಯಾದರೂ ಕಾಪಾಡುತ್ತೇನೆ ಎಂಬ ಸಂದೇಶವನ್ನು ರವಾನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಲ್ಕಿಸ್ ಬಾನು ಪ್ರಕರಣ, ಅತ್ಯಾಚಾರಿಗಳ ಬಿಡುಗಡೆ ಗುಜರಾತ್ ಸರ್ಕಾರದ ನಿರ್ಲಜ್ಜ ಕ್ರಮ: ಪ್ರಕಾಶ್ ರೈ 11 ಜನ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ಕೊಟ್ಟ ನ್ಯಾಯಮೂರ್ತಿ ಸಾಳ್ವೆಯವರು ಅವಧಿಪೂರ್ಣ ಬಿಡುಗಡೆ ವಿಷಯ ತಿಳಿದು ಆತಂಕವಾಗಿದ್ದಾರೆ. 'ನನ್ನನ್ನೊಮ್ಮೆ ಕೇಳಬಹುದಿತ್ತು. ಯಾಕೆ ಅವರಿಗೆ ನಾನು ಜೀವಾವಧಿ ಶಿಕ್ಷೆ ಕೊಟ್ಟಿದ್ದೆ ಎಂದು ಹೇಳುತ್ತಿದ್ದೆ' ಎಂಬ ನ್ಯಾ. ಸಾಳ್ವೆ ಅವರು ಹೇಳಿದ್ದನ್ನು ಪ್ರಕಾಶ್ ರೈ ಉಲ್ಲೇಖಿಸಿದರು.
ಇದನ್ನೂ ಓದಿ:ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ.. ಕೇಂದ್ರ, ಗುಜರಾತ್ ಸರ್ಕಾರಗಳಿಗೆ ಸುಪ್ರೀಂ ನೋಟಿಸ್