ಮೈಸೂರು: ಬೆಂಗಳೂರು- ಮೈಸೂರು ನಡುವಿನ ಮೊದಲ ಹಂತದ ಟೋಲ್ ಸಂಗ್ರಹ ಸೋಮವಾರದಿಂದ ಆರಂಭವಾಗಬೇಕಿತ್ತು. ಆದರೆ ಸರ್ವೀಸ್ ರೋಡ್ಗಳ ಕಾಮಗಾರಿ ಪೂರ್ಣಗೊಂಡಿಲ್ಲದ ಕಾರಣ, ಈ ಸರ್ವೀಸ್ ರಸ್ತೆಗಳು ಪೂರ್ಣಗೊಂಡ ನಂತರ ಟೋಲ್ ಸಂಗ್ರಹವನ್ನು ಆರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು- ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇ ಮಾರ್ಚ್ 11 ರಂದು ಉದ್ಘಾಟನೆ ಆಗಲಿದೆ. ಅದಕ್ಕೂ ಮುನ್ನ ಸೋಮವಾರದಿಂದ ಮೊದಲ ಹಂತದ ಟೋಲ್ ಸಂಗ್ರಹವನ್ನು ಆರಂಭಿಸುವ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಇನ್ನೂ ಸಂಪೂರ್ಣ ಕಾಮಗಾರಿ ಮುಗಿದಿಲ್ಲ, ಅಗಲೇ ಟೋಲ್ ಸಂಗ್ರಹ ಆರಂಭಿಸುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆ ಪೂರ್ಣಗೊಳಿಸಿ ಆನಂತರ ಟೋಲ್ ಸಂಗ್ರಹವನ್ನು ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್ಬುಕ್ ಪೇಜ್ನಲ್ಲಿ ತಿಳಿಸಿದ್ದಾರೆ.
ಡಿಕೆಶಿ ವಿರೋಧ : ಕಳೆದ ವಾರ ಮೈಸೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಬೆಂಗಳೂರು- ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇಗೆ ಟೋಲ್ ಸಂಗ್ರಹ ಮಾಡುವ ಮುನ್ನ, ಸರ್ವೀಸ್ ರಸ್ತೆಗಳನ್ನು ಮಾಡಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ. ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದ್ದರು.