ಸಂಸದ ಪ್ರತಾಪ್ ಸಿಂಹ ಮಾತನಾಡಿದರು ಮೈಸೂರು:ಮೈಸೂರು- ಬೆಂಗಳೂರು ನಡುವಿನ ಎಕ್ಸ್ಪ್ರೆಸ್ ಹೈವೇಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುವುದು. ಸರಕು ಸಾಗಣೆ ವಾಹನಗಳನ್ನು ಹೆದ್ದಾರಿ ಎಡಭಾಗದಲ್ಲಿ ಚಲಿಸುವಂತೆ ಕ್ರಮ ವಹಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಬೆಂಗಳೂರು- ಮೈಸೂರು ನಡುವಿನ ದಶಪಥ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಪ್ರತಿದಿನ ಅಪಘಾತಗಳು ನಡೆಯುತ್ತಿದ್ದು, ಇದಕ್ಕೆ ಹೈವೇ ಅವೈಜ್ಞಾನಿಕವಾಗಿ ನಿರ್ಮಾಣ ಆಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಆದ್ರೆ, ಈ ಎಕ್ಸ್ಪ್ರೆಸ್ ಹೈವೇ ವೈಜ್ಞಾನಿಕವಾಗಿ ನಿರ್ಮಾಣ ಆಗಿದೆ. ಚಾಲಕರ ಬೇಜವಾಬ್ದಾರಿ ಹಾಗೂ ಅಜಾಗರೂಕತೆಯ ಚಾಲನೆಯಿಂದ ಈ ಅಪಘಾತಗಳಿಗೆ ಕಾರಣವಾಗಿದ್ದು, ಈ ಹೈವೇಯಲ್ಲಿ ಇನ್ಮುಂದೆ ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳ ಚಾಲನೆಗೆ ಅವಕಾಶ ಇರುವುದಿಲ್ಲ. ಇವುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ'' ಎಂದು ತಿಳಿಸಿದರು.
''ಹೆದ್ದಾರಿಯ ಮಧ್ಯ ಭಾಗದ ಎರಡು ಕಡೆಯ ಆರು ಪಥದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಸಂಚಾರ ನಿರ್ಬಂಧಿಸಲಾಗಿದ್ದು, ಉಳಿದ ನಾಲ್ಕು ಪಥದ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಸಂಚಾರ ಮಾಡಬಹುದು. ಇದರ ಜೊತೆಗೆ ಎಕ್ಸ್ಪ್ರೆಸ್ ಹೈವೇಯ ಎಡಭಾಗದಲ್ಲಿ ಸರಕು ಸಾಗಣೆ ವಾಹನಗಳು ಚಲಿಸುವಂತೆ ಕ್ರಮ ವಹಿಸಲಾಗುವುದು'' ಎಂದರು.
ಮಂಡ್ಯದಿಂದ ಮೈಸೂರಿನವರೆಗೆ ಟೋಲ್ ಸಂಗ್ರಹ ಜುಲೈನಿಂದ ಆರಂಭ: ''ಹೆದ್ದಾರಿ ನಿರ್ಮಾಣ ಮಾಡುವಾಗ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕಡೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದು, ಈಗ ಅದು ನಮ್ಮ ಅನುಭವಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಹೈವೇಯಲ್ಲಿ ಶೌಚಾಲಯ, ಪೆಟ್ರೋಲ್ ಬಂಕ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಮಂಡ್ಯದಿಂದ ಮೈಸೂರಿನವರೆಗೆ ಟೋಲ್ ಸಂಗ್ರಹವನ್ನು ಜುಲೈನಿಂದ ಆರಂಭ ಮಾಡುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಟೋಲ್ ಸಂಗ್ರಹಿಸುವ ಅವಧಿಯನ್ನು ಮುಂದೂಡುವ ಕುರಿತು ಸಂಸದ ಪ್ರತಾಪ್ ಸಿಂಹ ಸುಳಿವು ನೀಡಿದರು.
''ಬೆಂಗಳೂರು- ಮೈಸೂರು ಹೈವೇಯಲ್ಲಿ ದೆಹಲಿ-ಮಿರತ್ ಮತ್ತು ವಡೋದರ-ದೆಹಲಿ ಎಕ್ಸ್ಪ್ರೆಸ್ ಮಾರ್ಗದಲ್ಲಿ ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನ ಜೊತೆಗೆ ಟ್ರಾಕ್ಟರ್ಗಳಂತಹ ಕೃಷಿ ವಾಹನ ಹಾಗೂ ಸೈಕಲ್ಗಳ ಪ್ರವೇಶಕ್ಕೆ ನಿಷೇಧವಿದ್ದು, ಅದೇ ರೀತಿ ನಿಷೇಧವನ್ನು ಮೈಸೂರು- ಬೆಂಗಳೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಈ ರೀತಿಯ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ನಿಷೇಧದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಜುಲೈ ಮಧ್ಯ ವಾರದಿಂದ ಈ ವಾಹನಗಳಿಗೆ ನಿಷೇಧ ಹೇರುವ ಬಗ್ಗೆ ಚಿಂತಿಸಲಾಗುತ್ತಿದೆ'' ಎಂದು ಸಂಸದರು ವಿವರಿಸಿದರು.
ಇದನ್ನೂ ಓದಿ:ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳು...