ಕರ್ನಾಟಕ

karnataka

ETV Bharat / state

ತಮಿಳುನಾಡಿಗೆ ನೀರು ಬಿಡುವ ಮುನ್ನ ಕಾವೇರಿ ಜಲಾಶಯದ ನಾಲೆಗಳಿಗೆ ನೀರು ಹರಿಸಲಿ: ಕುರುಬೂರು ಶಾಂತಕುಮಾರ್ - ಹತ್ತಿ ಬೆಳೆಗೆ ಬೆಳೆ ವಿಮಾ ಪರಿಹಾರ

ಕಬ್ಬು ದರ ನಿಗದಿ, ರೈತರಿಗೆ ಕಬ್ಬಿನ 150 ರೂ ಬಾಕಿ ಹಣ ಪಾವತಿ, ಕಾವೇರಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಆ.14ರಂದು ಮೈಸೂರು ಡಿಸಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

Kuruburu Shanthakumar spoke at the press conference.
ಕುರುಬೂರು ಶಾಂತಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By

Published : Aug 6, 2023, 9:33 PM IST

ಮೈಸೂರು: ಕಾವೇರಿ ಭಾಗದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುವ ಮುನ್ನ ನಾಲೆಗಳಿಗೆ ನೀರು ಹರಿಸಿ, ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ಜಲದರ್ಶಿನಿ ಸರಕಾರಿ ಅತಿಥಿಗೃಹದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸಂಕಷ್ಟ ಕಾಲದಲ್ಲೂ ಸ್ಥಳೀಯ ರೈತರನ್ನು ನಿರ್ಲಕ್ಷಿಸಿ ಕಬಿನಿ, ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿ, ಅಚ್ಚುಕಟ್ಟು ಭಾಗದ ರೈತರನ್ನು ಬಲಿ ಕೊಡುವುದು ಸರಿಯಲ್ಲ. ಜಲಾಶಯದ ಎಲ್ಲ ನಾಲೆಗಳಿಗೆ ನೀರು ಹರಿಸಿ ರೈತರು ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಹತ್ತಿ ಬೆಳೆಗೆ ಬೆಳೆ ವಿಮೆ: ಹತ್ತಿ ಬೆಳೆಗೆ ಬೆಳೆ ವಿಮಾ ಪರಿಹಾರ ಇನ್ನೂ ಬಂದಿಲ್ಲ. ಕೂಡಲೇ ನಷ್ಟದ ಪರಿಹಾರ ಕೊಡಿಸಬೇಕು. ಕೃಷಿ ಪಂಪಸಟ್‌ಗಳಿಗೆ ಹಗಲು ವೇಳೆ 12 ಗಂಟೆ ಕಾಲ ವಿದ್ಯುತ್ ನೀಡಬೇಕು. ಕಬ್ಬಿನ 150 ರೂ. ಬಾಕಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಸಕ್ಕರೆ ಕಾರ್ಖಾನೆ ಉಪಕಚೇರಿ ಮುಂದೆ ಪ್ರತಿಭಟಿಸಿ ಆಗ್ರಹಿಸಿದರೂ, ಸಮಸ್ಯೆ ಬಗೆಹರಿದಿಲ್ಲ. ರೈತರ 150 ರೂ ಬಾಕಿ ಕೊಟ್ಟಿಲ್ಲ, ಒಂದು ವಾರದ ಗಡುವು ನೀಡಿದರೂ ಪ್ರಯೋಜನವಾಗಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ, ರೈತರಿಗೆ ನ್ಯಾಯ ಸಿಕ್ಕಿಲ್ಲ. ಶೇ.30ರಷ್ಟು ರೈತರು ಬೇಸತ್ತು ಕಬ್ಬು ಬೆಳೆಯಿಂದ ದೂರವಾಗುತ್ತಿದ್ದಾರೆ ಎಂದು ದೂರಿದರು.

ಪಕ್ಕದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಬಣ್ಣಾರಿ ಕಾರ್ಖಾನೆಗಿಂತ 100 ರೂ. ಹೆಚ್ಚು ನೀಡಿ ಕಬ್ಬು ಖರೀದಿಸುತಿದ್ದಾರೆ. ಮಹದೇಶ್ವರ ಹಾಗೂ ಬಣ್ಣಾರಿ ಸಕ್ಕರೆ ಕಾರ್ಖಾನೆಯವರಿಗೆ ಹೆಚ್ಚುವರಿ ಹಣ ನೀಡಲು ಯಾಕೆ ಸಾಧ್ಯವಾಗಿಲ್ಲ?, ಕಬ್ಬು ಕಟಾವು ಕೂಲಿ ಸಾಗಣೆ ವೆಚ್ಚವನ್ನು ಕಾರ್ಖಾನೆಯವರು ಮನಬಂದಂತೆ ಸುಲಿಗೆ ಮಾಡಲಾಗುತ್ತಿದೆ. ಈ ವರ್ಷ ನಿಗದಿ ಮಾಡಿರುವ ಕಟಾವು ಕೂಲಿ 450 ರೂ.ಗಿಂತ ಹೆಚ್ಚುವರಿ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದರು.

ಕಬ್ಬು ಒಯ್ಯುವ ಲಾರಿ ವಿಳಂಬವಾಗಿ ತೂಕ ಕಡಿಮೆ ಬರುತ್ತಿದೆ. ಕಬ್ಬಿನ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ. ಇದನ್ನು ತಪ್ಪಿಸಬೇಕು. ಕಬ್ಬು ಒಪ್ಪಂದ ಮಾಡಿಕೊಂಡ ರೈತರಿಗೆ ಒಪ್ಪಂದ ಪತ್ರದ ಪ್ರತಿ ನೀಡಬೇಕು. ಕಾರ್ಖಾನೆಯವರು ವಿಳಂಬ ಮಾಡಿದರೆ, ವಿಳಂಬದ ಅವಧಿಗೆ ಹೆಚ್ಚುವರಿ ಹಣ ಕೊಡಬೇಕು. ಸಕ್ಕರೆ ಕಾರ್ಖಾನೆಗಳ ಲೈಸನ್ಸ್​​​ ಸಂಬಂಧಿಸಿದ ಅಧಿಕಾರಿ, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಶೇ. 30ರಷ್ಟು ಕಬ್ಬು ಕಡಿಮೆಯಾಗಿದೆ. ಕಾರ್ಖಾನೆಗಳ ಬೇಡಿಕೆ ಹೆಚ್ಚಾಗಿದೆ. ಬೇರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿಗೆ ಹೆಚ್ಚುವರಿ ಹಣ ಕೊಟ್ಟು ಖರೀದಿಸಲು ಮುಂದಾಗುತ್ತಿದ್ದಾರೆ. ರೈತರು ಕಬ್ಬು ಕಟಾವು ಮಾಡಲು ಹಾತೊರೆಯಬಾರದು, ತಾಳ್ಮೆಯಿಂದ ಹೋರಾಟಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.

ಇದನ್ನೂಓದಿ:ದೇಶ ಹಾಳು ಮಾಡಿದ್ದು ಯಾರೆಂದು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ: ಸಂಸದ ಸಂಗಣ್ಣ ಕರಡಿ

ABOUT THE AUTHOR

...view details