ಮೈಸೂರು : ಬೆಂಗಳೂರು- ಮೈಸೂರು ನಡುವಿನ ದಶಪಥ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಡಬೇಕೆಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಇಂದು ನಗರದ ಚಾಮರಾಜೇಂದ್ರ ಅರಸು ಬೋರ್ಡಿಂಗ್ ಸ್ಕೂಲ್ನಲ್ಲಿ ಹೊಸ ಕೋರ್ಸ್ ಗಳನ್ನು ಆರಂಭಿಸಿದ ಬಳಿಕ 'ಈಟಿವಿ ಭಾರತ' ಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು - ಮೈಸೂರು ನಡುವಿನ ದಶಪಥ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಇಡುವಂತೆ ಒತ್ತಾಯ ಕೇಳಿಬರುತ್ತಿದೆ. ಸಂಸದೆ ಸುಮಲತಾ ಅಂಬರೀಶ್, ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಸೇರಿದಂತೆ ಹಲವು ಮುಖಂಡರು ದಶಪಥ ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಸಂಸದ ಪ್ರತಾಪ್ ಸಿಂಹ ದಶಪಥ ರಸ್ತೆಗೆ ಕಾವೇರಿ ಹೈ ವೇ ಎಂದು ಹೆಸರಿಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ಬದ್ಧ : ಈ ಬಗ್ಗೆ ಈಟಿವಿ ಭಾರತ ದೊಂದಿಗೆ ಮಾತನಾಡಿರುವ ರಾಜವಂಶಸ್ಥ ಯದುವೀರ್ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ನಾವು ಬದ್ಧ. ಈ ವಿಚಾರದಲ್ಲಿ ನಮ್ಮ ತಕರಾರು ಇಲ್ಲ. ಸರ್ಕಾರಕ್ಕೆ ಯಾವುದು ಸೂಕ್ತ ಅನಿಸುತ್ತದೋ ಅದನ್ನೇ ಮಾಡಲಿ ಎಂದು ಹೇಳಿದರು.
ಚಾಮುಂಡಿ ಬೆಟ್ಟಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಮಾಡಿ :ಈ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್ ಅವರು, ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ "ಪ್ರಸಾದ್" ಯೋಜನೆ ಅಡಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಚಾಮುಂಡಿ ಬೆಟ್ಟದಲ್ಲಿ ಅಭಿವೃದ್ಧಿ ಮಾಡುವಾಗ ಪರಿಸರ ಕಾಳಜಿ ಇಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡಬೇಕು. ಚಾಮುಂಡಿ ಬೆಟ್ಟ ಒಂದು ಧಾರ್ಮಿಕ ಸ್ಥಳ. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸುರಕ್ಷತೆ ಬಗ್ಗೆ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡಬೇಕು. ಜೊತೆಗೆ ಚಾಮುಂಡಿ ಬೆಟ್ಟದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಅಭಿವೃದ್ಧಿ ಕೆಲಸ ಆಗಲಿ ಎಂದು ಸಲಹೆ ನೀಡಿದರು.