ಮೈಸೂರು:ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿಯ ಗಲಭೆ ಹಿಂದೆ ಯಾವ ಸಂಘಟನೆಯ ಕೈವಾಡವಿದ್ದರೂ ಅದನ್ನು ನಿಷೇಧ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಲಭೆ ಪ್ರಕರಣದಲ್ಲಿ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿ ಹಾನಿ ಮಾಡಿದ ವ್ಯಕ್ತಿಗಳಿಂದಲೇ ನಷ್ಟ ಭರಿಸಲಾಗುವುದು. ಬೆಂಗಳೂರಿನ ಜಿಲ್ಲಾಧಿಕಾರಿಗೆ ವರದಿ ನೀಡುವಂತೆ ಕೇಳಲಾಗಿದೆ ಎಂದರು.
ಕೊರೊನಾ ಪರೀಕ್ಷೆಗಳು ಹೆಚ್ಚಾಗಿ ಮಾಡುತ್ತಿರುವುದರಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ರೋಗದ ಲಕ್ಷಣಗಳು ಇದ್ದವರು ತಡ ಮಾಡದೇ ಆಸ್ಪತ್ರೆಗೆ ದಾಖಲಾಗಬೇಕು. ಗಭೀರವಾಗುವ ತನಕ ಕಾಯಬಾರದು. ಇದರಿಂದ ಅನಾಹುತಗಳೇ ಹೆಚ್ಚು ಎಂದರು.
ಮೈಸೂರಿನಲ್ಲಿ ಕೊರೊನಾದಿಂದ ಸಾವಿನ ಸಂಖ್ಯೆ ಏರುತ್ತಿರುವುದರಿಂದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ಸಾವಿನ ಪ್ರಮಾಣ ಕಡಿಮೆಯಾಗಲು ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ದಸರಾ ಬಗ್ಗೆ ಚಿಂತನೆ ಮಾಡಿಲ್ಲ:ಈ ಬಾರಿ ದಸರಾ ಹಬ್ಬ ಮಾಡುವ ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ. ಮೊದಲು ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗಬೇಕು. ಅಲ್ಲದೆ ಪ್ರವಾಹ ತಗ್ಗಬೇಕು ಎಂದರು.