ಮೈಸೂರು : ವಿಶ್ವವಿಖ್ಯಾತ ಮೈಸೂರು ಅಂಬಾವಿಲಾಸ ಅರಮನೆಯ ಹೊರಾಂಗಣದಲ್ಲಿ ಭದ್ರತೆಯ ಉದ್ದೇಶದಿಂದ ಡ್ರೋನ್ ಕ್ಯಾಮರಾಗಳ ಬಳಕೆ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಅರಮನೆಯ ಹೊರಾಂಗಣದಲ್ಲಿ ಡ್ರೋನ್ ಕ್ಯಾಮರಾ ಬಳಸುವುದನ್ನು ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಡ್ರೋನ್ ಬಳಸಲು ಅರಮನೆ ಆಡಳಿತ ಮಂಡಳಿಯಿಂದ ಪೂರ್ವಾನುಮತಿ ಪಡೆಯಬೇಕು. ಅನುಮತಿ ಪಡೆಯದೆ ಡ್ರೋನ್ ಕ್ಯಾಮರಾ ಬಳಸಿದರೆ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಅರಮನೆ ಸುತ್ತಮುತ್ತಲಿನ ಪ್ರದೇಶವನ್ನು 'ಹಳದಿ ವಲಯ' ಎಂದು ಗುರುತಿಸಲಾಗಿದೆ. ಆದ್ದರಿಂದ, ಹೊರಾಂಗಣದಲ್ಲಿ ಡ್ರೋನ್ ಕ್ಯಾಮರಾ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದಸರಾ ಅದ್ದೂರಿ ಆಚರಣೆ: ಹಬ್ಬಕ್ಕೆ ನೆಂಟರಿಷ್ಟರನ್ನು ಕರೆದು ಅರ್ಧ ಊಟ ಮಾಡಿ ಎಂದು ಹೇಳಲು ಸಾಧ್ಯವೇ? ಕಷ್ಟವೋ, ಸುಖವೋ ಈ ವರ್ಷ ಮೈಸೂರಿನಲ್ಲಿ ದಸರಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸೋಣ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ (ಜುಲೈ 29-2023) ಹೇಳಿದ್ದರು. ಅಂದು ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಿತ್ತನೆ ಬೀಜ ವಿತರಣೆ ಬಗ್ಗೆ ಮಾಹಿತಿ ಪಡೆದ ಸಚಿವರು, ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದರು. ''ಈ ಬಾರಿ ನಾಡಹಬ್ಬ ದಸರಾ ಆಚರಣೆ ಬಗ್ಗೆ ದಸರಾ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು. ಹಿಂದಿನ ವರ್ಷ ಕೋವಿಡ್ ನಿಂದ ಜನ ತತ್ತರಿಸಿ ಹೋಗಿದ್ದರು. ಈ ವರ್ಷ ಎಲ್ಲವೂ ಸುಭೀಕ್ಷವಾಗಿ ನಡೆಯತ್ತಿದೆ. ಹೊಸ ಸರ್ಕಾರ ಬಂದಿದೆ. ಉತ್ತಮವಾಗಿ ಮಳೆಯಾಗುತ್ತಿದೆ'' ಎಂದು ಹೇಳಿದ್ದರು.
ಇದನ್ನೂ ಓದಿ:ಈ ವರ್ಷ ವಿಶ್ವ ಪ್ರಸಿದ್ದ ಮೈಸೂರು ದಸರಾ ಅದ್ದೂರಿ ಆಚರಣೆ: ಸಚಿವ ಮಹಾದೇವಪ್ಪ