ಮೈಸೂರು:ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್ ವಿರುದ್ಧ, ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ದೂರು ದಾಖಲಾಗಿರುವುದಕ್ಕೆ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರೈತಮಹಾಪಂಚಾಯತ್ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಶಿವಮೊಗ್ಗ ಠಾಣಾ ಪೊಲೀಸರು ರಾಕೇಶ್ ಟಿಕಾಯಿತ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಆದರೆ, ನಾನು ಅವರ ಭಾಷಣವನ್ನ ಕೇಳಿದ್ದೇನೆ. ಅವರ ಭಾಷಣದಲ್ಲಿ ಎಲ್ಲಿಯೂ ಪ್ರಚೋದನಕಾರಿ ಅಂಶಗಳಿಲ್ಲ ಎಂದು ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಈ ರೀತಿ ಸುಳ್ಳು ಪ್ರಕರಣ ದಾಖಲಿಸಿ, ಹೋರಾಟಗಾರರ ಧ್ವನಿ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಇದು ರಾಜ್ಯ ಸರ್ಕಾರದ ಮುರ್ಖತನ. ಕೂಡಲೇ ಪ್ರಕರಣ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ರೈತರು ಪ್ರತಿಭಟನೆಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.
ಈ ಹಿಂದೆ ಸಂಘ ಪರಿವಾರದವರು ಸಂವಿಧಾನ ಸುಟ್ಟಾಗ ಯಾವುದೇ ದೂರು ದಾಖಲಾಗಿಲ್ಲ. ಅಲ್ಲದೇ ಕೋಮುದ್ವೇಷ ಭಿತ್ತಿ, ಪ್ರಚೋದನಕಾರಿ ಭಾಷಣ ಮಾಡಿದ ಸಂಘ ಪರಿವಾರದವರ ವಿರುದ್ಧ ಕ್ರಮಗಳಾಗಿಲ್ಲ. ಸಂಘ ಪರಿವಾರದವರ ಮೇಲಿರುವ ಪ್ರಕರಣಗಳನ್ನ ವಾಪಸ್ ಪಡೆಯಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ರಾಕೇಶ್ ಟಿಕಾಯತ್ ಮೇಲಿನ ಪ್ರಕರಣವನ್ನು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಬಿಎಸ್‌ವೈ, ಗೃಹ ಸಚಿವ ಬಸವರಾಜ ಬೊಮ್ಮಾಯಿ ದೂರು ವಾಪಸ್ ಪಡೆಯುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ನಾಗೇಂದ್ರ ಆಗ್ರಹಿಸಿದರು.