ಮೈಸೂರು : ನಾವು ಅಧಿಕಾರಕ್ಕೆ ಬಂದರೆ ಶಾದಿ ಭಾಗ್ಯವನ್ನ ಪುನಃ ತರುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾದಿ ಭಾಗ್ಯ ಮಾಡಿದ್ದರಿಂದಲೇ ಸಿದ್ದರಾಮಯ್ಯ ಅವರಿಗೆ ದೌರ್ಭಾಗ್ಯ ಬಂದಿದ್ದು, ಇದನ್ನ ಮತ್ತೆ ಮುಂದುವರೆಸುತ್ತೇನೆ ಎಂದರೆ, ಪಕ್ಷಕ್ಕೂ ದೌರ್ಭಾಗ್ಯ ಬರಲಿದೆ ಎಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಹೇಳಿಕೆ ನೀಡಿದರು.
ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಸವರಾಜ ಬೊಮ್ಮಾಯಿ, ಮಾಧ್ಯಮಗಳ ಜೊತೆ ಮಾತನಾಡಿ, 2023 ರ ಬಜೆಟ್ ಜನಪರ ಬಜೆಟ್ ಆಗಲಿದ್ದು, ಮೈಸೂರು ಸೇರಿದಂತೆ ಎಲ್ಲರಿಗೂ ಉತ್ತಮ ಬಜೆಟ್ ನಿರೀಕ್ಷೆ ಮಾಡಬಹುದು ಎಂದರು. ನಾವು ಅಧಿಕಾರಕ್ಕೆ ಬಂದರೆ ಕೊಟ್ಟ ಭರವಸೆಗಳನ್ನ ಈಡೇರಿಸದಿದ್ದರೆ, ರಾಜಕೀಯ ಸನ್ಯಾಸತ್ವ ಮಾಡುತ್ತೇವೆ ಎಂಬ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು, ತಮ್ಮ ಮನಸ್ಸಿನಲ್ಲಿ ಇರುವ ಮಾತುಗಳನ್ನ ಹೊರಗೆ ಹೇಳಿದ್ದಾರೆ.
ನಾವೆಂದೂ ಸನ್ಯಾಸತ್ವದ ಮಾತು ಆಡಿಲ್ಲ. ಈ ಮಾತನ್ನ ಇವರೇ ಪದೇ ಪದೆ ಮಾತನಾಡುತ್ತಿದ್ದಾರೆ. ಅದು ಅವರ ಮನಸ್ಸಿನ ಕನ್ನಡಿ ಆಗಿದೆ. ಇನ್ನು ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಶಾದಿ ಭಾಗ್ಯ ಮುಂದುವರೆಸುತ್ತೇವೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಶಾದಿ ಭಾಗ್ಯ ಮಾಡಿದ್ದರಿಂದಲೇ ಸಿದ್ದರಾಮಯ್ಯನವರಿಗೆ ದೌರ್ಭಾಗ್ಯ ಬಂತು. ಅದನ್ನ ಮತ್ತೆ ಮುಂದುವರಿಸುತ್ತಿರುವ, ಮಾತನಾಡುತ್ತಿರುವ ಇವರಿಂದ ಪಕ್ಷಕ್ಕೂ ದೌರ್ಭಾಗ್ಯ ಬರಲಿದೆ ಎಂದರು.
ಕಾಡುಪ್ರಾಣಿಗಳ ಸೆರೆಗೆ ಟಾಸ್ಕ್ ಫೋರ್ಸ್ ರಚನೆ : ಟಾಸ್ಕ್ ಫೋರ್ಸ್ ತಂಡ ಚಿರತೆಯನ್ನ ಈಗಾಗಲೇ ಮೈಸೂರಿನಲ್ಲಿ ಸೆರೆ ಹಿಡಿದಿದ್ದಾರೆ. ಹಾಸನ ಸೇರಿದಂತೆ ಬೇರೆ ಕಡೆಯೂ ಈ ಸಮಸ್ಯೆ ಇದೆ. ಟಾಸ್ಕ್ ಫೋರ್ಸ್ ನಿರಂತರವಾಗಿ ಇರಲಿದ್ದು, ಚಿರತೆಯ ಜೊತೆಗೆ ಆನೆ ಸೆರೆಗೂ ಖಾಯಂ ಟಾಸ್ಕ್ ಫೋರ್ಸ್ ರಚನೆಯನ್ನು ಮಾಡುತ್ತೇವೆ. ಇದಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನ ಸರ್ಕಾರ ಮಾಡುತ್ತದೆ. ಮುಖ್ಯವಾಗಿ ಅರಣ್ಯದಂಚಿನಲ್ಲಿ ಇರುವ ಜನರಿಗೆ ಅವಶ್ಯಕವಾದ ಧೈರ್ಯವನ್ನ ಈ ಟಾಸ್ಕ್ ಪೋರ್ಸ್ ನೀಡಲಿದ್ದು, ಸಾಮಾನ್ಯವಾಗಿ ಕಾಡಂಚಿನ ಜನರು ಸಂಜೆ ಮನೆಯಿಂದ ಹೊರಬರದಂತೆ ತಿಳಿಸಬೇಕು ಎಂದು ಸೂಚನೆ ನೀಡಿದ್ದು, ಈ ಟಾಸ್ಕ್ ಫೋರ್ಸ್ಗೆ ಸರ್ಕಾರ ಸಂಪೂರ್ಣ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.