ಮೈಸೂರು: ಬಿ ಎಸ್ ಯಡಿಯೂರಪ್ಪ ಮತ್ತು ನನ್ನನ್ನು ಪಂಚಮಸಾಲಿ ಲಿಂಗಾಯಿತರ ವಿರೋಧಿ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪನವರು ಪಂಚಮಸಾಲಿ ಮೀಸಲಾತಿ ವಿರೋಧಿ ಎಂದು ಯಾರೋ ರಾಜಕೀಯ ಕಾರಣಕ್ಕೆ ಸ್ವಾಮೀಜಿಗಳ ತಲೆ ಕೆಡಿಸಲಾಗಿದೆ. ಅವರ ವಿರುದ್ಧ ಸ್ವಾಮೀಜಿಗಳು ಮಾತನಾಡುವಂತೆ ತಂತ್ರ ರೂಪಿಸಿದ್ದಾರೆ. ಈ ವಿಚಾರದಲ್ಲಿ ನನ್ನ ಹೆಸರು ಕೇಳಿಬರುತ್ತಿದೆ ಎಂದರು.
ಯಡಿಯೂರಪ್ಪ ಸಿಎಂ ಬೊಮ್ಮಾಯಿ ಅವರಿಗೆ ಪಂಚಮಸಾಲಿ ಮೀಸಲಾತಿ ನೀಡಬಾರದು ಎಂದು ಯಾವತ್ತೂ ಒತ್ತಡ ಹೇರಿಲ್ಲ. ಯಡಿಯೂರಪ್ಪ ಎಂದಿಗೂ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.
ಐಸಿಸ್ ನಂಟಿನ ಬಗ್ಗೆ ವಿಜಯೇಂದ್ರ ಹೇಳಿದ್ದೇನು?: ಶಿವಮೊಗ್ಗದಲ್ಲಿ ಐಸಿಸ್ ನಂಟು ಹೊಂದಿರುವ ಇಬ್ಬರು ಯುವಕರನ್ನು ಬಂಧಿಸಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಶಿವಮೊಗ್ಗದಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಕಂಡು ಬರುತ್ತಿದೆ. ಉತ್ತಮ ಶಿಕ್ಷಣ ಪಡೆದವರೆ ಐಸಿಸ್ ಉಗ್ರರ ಸಂಪರ್ಕ ಹೊಂದಿರುವುದು ಉತ್ತಮ ಬೆಳವಣಿಗೆ ಅಲ್ಲ. ಇದರ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಧ್ವನಿ ಎತ್ತಬೇಕು ಎಂದರು.