ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಸ್ಥಾನ ಗೆಲ್ಲುವ ಗುರಿ ಇದ್ದು, ಹಳೇ ಮೈಸೂರು ಭಾಗ ನಮ್ಮ ಟಾರ್ಗೆಟ್ ಆಗಿದೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಗಿಂತ ಹೆಚ್ಚಿನ ಸ್ಥಾನ ನಾವು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನಗಳನ್ನ ಗೆಲ್ಲಬೇಕು ಎಂಬ ಗುರಿ ಇಟ್ಟಿದ್ದು, ಆ ಮೂಲಕ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವ ಗುರಿ ಇಟ್ಟುಕೊಂಡಿದ್ದೇವೆ. ಆದರೆ, ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದೆಬಿಟ್ಟೆವು ಎಂಬ ಹಗಲು ಕನಸನ್ನ ಕಾಣುತ್ತಿದ್ದಾರೆ. ಇನ್ನು ಚುನಾವಣೆ ಅಧಿಕೃತವಾಗಿ ಘೋಷಣೆಯೇ ಆಗಿಲ್ಲ, ಆಗಲೇ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ನೀಡುವ ಭರವಸೆ ನೀಡುತ್ತಿದ್ದಾರೆ. ಇದು ಹಾಸ್ಯಾಸ್ಪದವಾಗಿದ್ದು, ರಾಜ್ಯದ ಜನ ಈಗಾಗಲೇ ಕಾಂಗ್ರೆಸ್ನ ಫ್ಯೂಸ್ ಅನ್ನ ಕಿತ್ತುಹಾಕಿದ್ದಾರೆ ಎಂದರು.
ಹಳೇ ಮೈಸೂರು ಭಾಗ ಮುಂದಿನ ಟಾರ್ಗೆಟ್ :ಮುಂದಿನ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಈ ಬಾರಿ ಹಳೇ ಮೈಸೂರು ಭಾಗ ನಮ್ಮ ಟಾರ್ಗೆಟ್ ಆಗಿದೆ ಎಂದರು. ಮುಂದಿನ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ವರುಣಾದಿಂದ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಎಲ್ಲಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಹೈ ಕಮಾಂಡ್ಗೆ ಬಿಟ್ಟ ವಿಚಾರ. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಇನ್ನೂ ಫೈನಲ್ ಆಗಿಲ್ಲ. ಅದರೂ ರಾಜಕೀಯ ಶಕ್ತಿ ಕೊಟ್ಟಿರುವುದು ವರುಣದ ಜನರು, ಎಲ್ಲಿ ಸ್ಪರ್ಧೆ ಮಾಡಿದರೂ ಈ ಜನರಿಗೆ ನಾನು ಚಿರಋಣಿ ಆಗಿರುತ್ತೇನೆ ಎಂದು ವಿಜಯೇಂದ್ರ ಇದೇ ಸಂದರ್ಭದಲ್ಲಿ ಹೇಳಿದರು.
ಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ: ಬಳಿಕ ಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಕೆ ಹರಿಪ್ರಸಾದ್ 17 ಜನ ಪಕ್ಷ ಬಿಟ್ಟು ಹೋದ ಶಾಸಕರನ್ನು ವೇಶ್ಯೆಯರಿಗೆ ಹೊಲಿಸಿ ಕ್ಷಮೆ ಕೇಳವುದು ದೊಡ್ಡದಲ್ಲ. ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಬೇಕು. ಅವರು ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿದ್ದರೆ. ಇಂತಹ ಹೇಳಿಕೆಗಳನ್ನ ನೀಡುವಾಗ ಯೋಚಿಸಬೇಕು. ಈ ರೀತಿ ಹೇಳಿಕೆ ಅವರಿಗೂ, ಅವರ ಪಕ್ಷಕ್ಕೂ ಶೋಭೆ ತರುವುದಿಲ್ಲ. ಇಂತಹ ಹೇಳಿಕೆಗಳು ಅವರ ಮನಸ್ಥಿತಿಯನ್ನು ತೋರುತ್ತದೆ ಎಂದು ಟೀಕಿಸಿದರು.
ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಉತ್ಪಾದಕರು ಮತ್ತು ಮಾರಾಟಗಾರರ ಕಾರ್ಯಾಗಾರ: ಇನ್ನು ಮೈಸೂರಿನ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಆಯೋಜನೆ ಮಾಡಿದ್ದ ಸಿರಿಧಾನ್ಯಗಳ ಬೇಸಾಯ, ಮೌಲ್ಯ ವರ್ಧನೆ ಮತ್ತು ಬಳಕೆಯ ಬಗ್ಗೆ ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಉತ್ಪಾದಕರು ಮತ್ತು ಮಾರಾಟಗಾರರ ಕಾರ್ಯಾಗಾರವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟನೆ ಮಾಡಿದರು.
ಬಳಿಕ ಬಿ.ಕೆ ಹರಿಪ್ರಸಾದ್ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೇಗೆ ಉತ್ತರಿಸಿದ ಅವರು, ಒಬ್ಬ ಮನುಷ್ಯ ಮಾತನಾಡುವಾಗ ಅವರ ಬಾಯಿಯಿಂದ ಬರುವ ಶಬ್ದಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಈ ಹಿನ್ನೆಲೆ ಅವರು ಬಳಸಿರು ಶಬ್ದಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಇನ್ನೊಬ್ಬರ ಬಗ್ಗೆ ಕೆಟ್ಟ ಆಪಾದನೆಗಳನ್ನು ಮಾಡಿ, ಕೀಳಾಗಿ ಮಾತನಾಡಿದರೆ ಜನ ಅದನ್ನು ಮೆಚ್ಚಿ ಮತ ಹಾಕುತ್ತಾರೆ ಎಂದರೆ ಅದಕ್ಕಿಂತ ದೊಡ್ಡ ಮೂರ್ಖತನ ಯಾವುದು ಇಲ್ಲ. ಒಂದಿಷ್ಟು ಜನ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾರೆಂದು ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿ ಅಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಇದನ್ನೂ ಓದಿ:ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಭರವಸೆ ಕೊಟ್ಟು ಬಂದಿದ್ದೇವೆ: ಬಿಎಸ್ ಯಡಿಯೂರಪ್ಪ