ಮೈಸೂರು: ಬಿ.ಕೆ.ಹರಿಪ್ರಸಾದ್ ಬಿಜೆಪಿಗೆ ಹೋಗುವುದು ಸೂಕ್ತ. ಒಂದು ವೇಳೆ ಬಿಜೆಪಿ ರಾಜ್ಯಸಭೆ ಸೀಟ್ ನೀಡಿ, ಮುಂದೆ ಸಚಿವ ಸ್ಥಾನವನ್ನೂ ನೀಡಬಹುದು. ಆ ರೀತಿ ಅವರು ನಿರ್ಧಾರ ತೆಗೆದುಕೊಂಡರೆ ನಾನು ಅದನ್ನು ಸ್ವಾಗತಿಸುತ್ತೇನೆ, ಸಹಾಯ ಮಾಡುತ್ತೇನೆ ಎಂದು ಮೈಸೂರಿನಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಪೀಠದ ಡಾ.ಶ್ರೀ ಪ್ರಣಾವನಂದ ಸ್ವಾಮೀಜಿ ಹೇಳಿದ್ದಾರೆ.
ಹೊಸ ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ರಾಷ್ಟ್ರೀಯ ಈಡಿಗ ಮಹಾಮಂಡಲದ ವತಿಯಿಂದ ಶ್ರೀಗಳು ತಮ್ಮ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸಿದ ಒಂದು ದಿನದ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ನಮ್ಮ ಸಮುದಾಯದವರು 70 ಲಕ್ಷ ಜನರಿದ್ದಾರೆ. ಈ ಸರ್ಕಾರ ಬಂದ ಮೇಲೆ ನಮ್ಮ ಸಮುದಾಯವನ್ನು ಕಡೆಗಣಿಸಿದೆ. ಸಮುದಾಯದ ನಿಗಮಕ್ಕೆ 500 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಈಡಿಗ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕುಲಶಾಸ್ತ್ರ ಅಧ್ಯಯನ ಮಾಡಿ ಶಿಫಾರಸು ಸಲ್ಲಿಸಬೇಕು. ಬೆಂಗಳೂರಿನಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪ್ರತಿಮೆ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿ.ಕೆ.ಹರಿಪ್ರಸಾದ್ ಅವರನ್ನು ಸರ್ಕಾರ ಕಡೆಗಣಿಸಿದೆ. ಇದೇ ರೀತಿ ಮುಂದುವರಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಮುದಾಯ ತಕ್ಕ ರೀತಿ ಪಾಠ ಕಲಿಸುತ್ತದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ನಮ್ಮ ಸಮಾಜದ ಹೆಸರಿನಲ್ಲಿ ಸಮಾವೇಶ ಮಾಡಿ, ನಮ್ಮ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ವಿರೋಧಿಸುತ್ತೇವೆ ಎಂದರು.
ಇದು ಹೀಗೇ ಮುಂದುವರಿದರೆ ಹಾಗೂ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಬರಬಾರದೆಂದು ಹರಿಪ್ರಸಾದ್ ಅವರನ್ನು ಮೂಲೆಗುಂಪು ಮಾಡಲು ಮುಂದಾದರೆ ಸರ್ಕಾರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಶ್ರೀಗಳು, ಬಿಜೆಪಿ ರಾಜ್ಯಸಭಾ ಸೀಟ್ ನೀಡಿ, ಮುಂದೆ ಸರ್ಕಾರ ಬಂದರೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡುವುದಾದರೆ ಬಿ.ಕೆ.ಹರಿಪ್ರಸಾದ್ ಬಿಜೆಪಿಗೆ ಹೋಗುವುದು ಸೂಕ್ತ ಎಂದರು.
ಒಂದು ವೇಳೆ ಬಿ.ಕೆ.ಹರಿಪ್ರಸಾದ್ ಈ ರೀತಿಯ ನಿರ್ಧಾರ ತೆಗೆದುಕೊಂಡರೆ ನಾನು ಸ್ವಾಗತಿಸುತ್ತೇನೆ. ಅಂಥ ಸನ್ನಿವೇಶ ಬಂದರೆ ನಾನೇ ಸಹಾಯ ಮಾಡುತ್ತೇನೆ. ಏಕೆಂದರೆ ಕಾಂಗ್ರೆಸ್ನಲ್ಲಿ ಅವರಿಗೆ ಮಾನ್ಯತೆ ಸಿಗುತ್ತಿಲ್ಲ, ಅಪಮಾನ ಮಾಡುತ್ತಿದ್ದಾರೆ. ಸ್ವತಃ ಸೋನಿಯಾ ಗಾಂಧಿಯವರೇ ಹರಿಪ್ರಸಾದ್ ಅವರನ್ನು ಮಂತ್ರಿಮಾಡಿ ಎಂದು ಹೇಳಿದ್ದರು. ಅದು ಉಲ್ಟಾ ಆಗಿದೆ. ಕಾಂಗ್ರೆಸ್ಗೆ ಬಂದು ಒಂದು ವರ್ಷ ಆದವರಿಗೆ ಮಂತ್ರಿ ಸ್ಥಾನ ನೀಡಿದ್ದೀರಿ. ಇಲ್ಲಿ ಹರಿಪ್ರಸಾದ್ ಅವರನ್ನು ಕಡೆಗಣನೆ ಮಾಡಿದ್ದೀರಿ. ಇದನ್ನು ಸಮುದಾಯ ಸಹಿಸುವುದಿಲ್ಲ ಎಂದು ಹೇಳಿದರು.
ಇದನ್ನೂಓದಿ:'ವಿಶ್ವಕರ್ಮ ಶ್ರಮ ಸನ್ಮಾನ ಯೋಜನೆ' ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಿ: ವಿಜಯೇಂದ್ರ