ಮೈಸೂರು: ಶರನ್ನವರಾತ್ರಿಯ 9ನೇ ದಿನವಾದ ಇಂದು ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ ಮನೆಮಾಡಿದೆ. ಆಯುಧ ಪೂಜೆ ದಿನ ಅರಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ.
ಶರನ್ನವರಾತ್ರಿಯಲ್ಲಿ 9ನೇ ದಿನ ಪ್ರಮುಖ ಧಾರ್ಮಿಕ ಕಾರ್ಯಗಳು ಅರಮನೆಯಲ್ಲಿ ನಡೆಯಲಿದ್ದು, ಬೆಳಗ್ಗೆ 6 ಗಂಟೆಗೆ ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ರಾಜರ ಕಾಲದ ಆಯುಧಗಳನ್ನು ಸ್ವಚ್ಛಗೊಳಿಸಿ, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆ ಹಾಗೂ ಮಂಗಳ ವಾದ್ಯಗಳಿಗೆ ಅರಮನೆ ಆನೆಬಾಗಿಲಿನಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ... ಬೆ. 6:15ಕ್ಕೆ ಅರಮನೆ ಒಳಗಡೆ ಚಂಡಿಕಾ ಹೋಮ, 6:28 ರಿಂದ 6:48 ರ ಸಮಯದಲ್ಲಿ ಹಿಂದೆ ರಾಜರು ಬಳಸುತ್ತಿದ್ದ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿ ಪೂಜೆ, ನಂತರ 7:20 ರಿಂದ 7:40 ರ ಸಮಯದಲ್ಲಿ ವಾಪಸ್ ಖಾಸಾ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ತಂದು ಪೂಜೆ ಸಲ್ಲಿಸುತ್ತಾರೆ.
ಬೆ 9:15 ಕ್ಕೆ ಚಂಡಿಕಾ ಹೋಮ ಪೂರ್ಣಾಹುತಿ, 10:15 ಕ್ಕೆ ಪಟ್ಟದ ಆನೆ, ಕುದುರೆ, ಹಸು, ಒಂಟೆಗಳು ಸವಾರಿ ತೊಟ್ಟಿಗೆ ಆಗಮನ. 10:50 ರಿಂದ 11:25ಕ್ಕೆ ಆಯುಧ ಪೂಜೆ ಕಾರ್ಯಕ್ರಮ ನಡೆಯಲಿದೆ.
ಸಂಜೆ ನವರಾತ್ರಿಯ ಮೊದಲ ದಿನ ರತ್ನ ಖಚಿತ ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹವನ್ನು ನಿಮಜ್ಜನ ಮಾಡಲಾಗುತ್ತದೆ. ನಂತರ ನವರಾತ್ರಿಯ ಮೊದಲ ದಿನ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಟ್ಟಿದ್ದ ಕಂಕಣವನ್ನು ಬಿಚ್ಚಿ, ಅರಮನೆ ಒಳಗೆ ಇರುವ ಅಮಲಾ ದೇವತಾ ಸನ್ನಿಧಿಯಲ್ಲಿ ದರ್ಶನ ಪಡೆಯಲಿದ್ದಾರೆ.