ಕರ್ನಾಟಕ

karnataka

ETV Bharat / state

ರಾಮಲಲ್ಲಾ ಮೂರ್ತಿ ಆಯ್ಕೆಯಾದರೆ ಅದು ನಮ್ಮ ಪುಣ್ಯ : ಶಿಲ್ಪಿ ಅರುಣ್ ಯೋಗಿರಾಜ್ ಪತ್ನಿ ಮತ್ತು ತಾಯಿಯ ಸಂದರ್ಶನ - Sculptor Arun Yogiraj

2024 ಜನವರಿ 22ರಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆ ನಡೆಯಲಿದೆ. ಮೈಸೂರಿನ ಶಿಲ್ಪಿ ಅರುಣ್​ ಯೋಗರಾಜ್​ ಕೆತ್ತನೆ ಮಾಡಿರುವ ರಾಮಲಲ್ಲಾನ ಮೂರ್ತಿ ಆಯ್ಕೆಯಾಗಿರುವ ಸುದ್ದಿ ಹರದಾಡಿರುವ ಬೆನ್ನಲ್ಲೇ, ಅರುಣ್​ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದಾರೆ.

ayodhya-ramlalla-statue-sculptor-arun-yogiraj-family-reaction
ರಾಮಲಲ್ಲಾ ಮೂರ್ತಿ ಆಯ್ಕೆಯಾದರೆ ಅದು ನಮ್ಮ ಪುಣ್ಯ : ಶಿಲ್ಪಿ ಅರುಣ್ ಯೋಗಿರಾಜ್ ಪತ್ನಿ ವಿಜೇತ ಸಂದರ್ಶನ

By ETV Bharat Karnataka Team

Published : Jan 1, 2024, 8:56 PM IST

Updated : Jan 1, 2024, 9:43 PM IST

ರಾಮಲಲ್ಲಾ ಮೂರ್ತಿ ಆಯ್ಕೆಯಾದರೆ ಅದು ನಮ್ಮ ಪುಣ್ಯ : ಶಿಲ್ಪಿ ಅರುಣ್ ಯೋಗಿರಾಜ್ ಪತ್ನಿ ವಿಜೇತ ಸಂದರ್ಶನ

ಮೈಸೂರು: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಉದ್ಘಾಟನೆಗೆ ಇನ್ನು ಕೇವಲ 21 ದಿನಗಳು ಬಾಕಿ ಇವೆ. ರಾಮಮಂದಿರದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವ ಭಗವಾನ್​ ರಾಮ್​ ಲಲ್ಲಾನ ಮೂರ್ತಿ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಈ ನಡುವೆ ಮೈಸೂರಿನ ಶಿಲ್ಪಿ ಅರುಣ್​ ಯೋಗರಾಜ್​ ಕೆತ್ತನೆ ಮಾಡಿರುವ ಬಾಲರಾಮನ ಮೂರ್ತಿ ಆಯ್ಕೆಯಾಗಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷನಾಯಕ ಆರ್​ ಅಶೋಕ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಅರುಣ್​ ಯೋಗಿರಾಜ್ ಕುಟುಂಬಸ್ಥರು ಯಾವುದೇ ಖಚಿತ ಮಾಹಿತಿ ನೀಡಿಲ್ಲ.

ಜನವರಿ 22ರಂದು ಅಯೋಧ್ಯೆಯಲ್ಲಿ 5 ವರ್ಷದ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಯುತ್ತಿದೆ. ಇಲ್ಲಿ ಪ್ರತಿಷ್ಠಾಪನೆ ಮಾಡುವ 51 ಇಂಚು ಎತ್ತರದ ರಾಮಲಲ್ಲಾ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ. ಈ ಮೂರ್ತಿಯು ಪ್ರತಿಷ್ಠಾಪನೆಗೆ ಅಂತಿಮವಾಗಿದೆ ಎಂಬ ಸುದ್ದಿ ನಡುವೆ ಅರುಣ್​ ಅವರ ಪತ್ನಿ ವಿಜೇತ ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.

ಶಿಲ್ಪಿ ಅರುಣ್ ಯೋಗಿರಾಜ್ ಪತ್ನಿ ವಿಜೇತ ಮಾತನಾಡಿ, ರಾಮಮಂದಿರದಲ್ಲಿ ಪ್ರತಿಷ್ಠಾಪನೆ ನಮ್ಮ ಮೂರ್ತಿ ಆಯ್ಕೆಯಾದರೆ ಅದು ನಮ್ಮ ಪುಣ್ಯ. ಈ ವಿಚಾರ ತುಂಬಾ ಹೆಮ್ಮೆ ಅನಿಸುತ್ತದೆ. ನಮ್ಮ ಕುಟುಂಬಸ್ಥರು ಇದೇ ವೃತ್ತಿ ಮಾಡಿಕೊಂಡು ಬಂದಿದ್ದಾರೆ. ಅವರು ದೇವರ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ. ಕಳೆದ ಜೂನ್​ ತಿಂಗಳಲ್ಲಿ ಅರುಣ್ ಯೋಗಿರಾಜ್ ಅಯೋಧ್ಯೆಗೆ ತೆರಳಿದ್ದರು ಎಂದು ಹೇಳಿದರು.

ಮೈಸೂರಿನ ಹೆಚ್ ಡಿ ಕೋಟೆಯ ಕೃಷ್ಣ ಶಿಲೆಯಲ್ಲಿ 5 ವರ್ಷದ ರಾಮಲಲ್ಲಾ ವಿಗ್ರಹ ಮಾಡಿದ್ದಾರೆ. ರಾಮನ ಮಂದಹಾಸದ ಮುಖ, ಹಾವಭಾವಗಳು ಚೆನ್ನಾಗಿ ಮೂಡಿ ಬಂದಿವೆ ಎಂದು ಅರುಣ್ ಹೇಳುತ್ತಿದ್ದರು. ಅಯೋಧ್ಯೆಯಲ್ಲಿ ಮೂರು ಕಡೆ ರಾಮನ ವಿಗ್ರಹ ಕೆತ್ತನೆ ಆಗುತ್ತಿದೆ. ಒಬ್ಬರು ಕೆತ್ತಿದ ಮೂರ್ತಿಯನ್ನು ಇನ್ನೊಬ್ಬರು ನೋಡುವಂತಿಲ್ಲ. ಆರು ತಿಂಗಳಿನಿಂದ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ನಾವು ಬೇರೆ ಯಾವುದೇ ಕೆಲಸವನ್ನು ತೆಗೆದುಕೊಂಡಿಲ್ಲ. ಅಂತಿಮವಾಗಿ ನಾವು ಮಾಡಿರುವ ಮೂರ್ತಿ ಆಯ್ಕೆಯಾದರೆ ಅದು ನಮ್ಮ ಪುಣ್ಯ. ಜೊತೆಗೆ ರಾಮನ ಮೂರ್ತಿ ಮಾಡಲು ಅವಕಾಶ ಸಿಕ್ಕಿರುವುದೇ ನಮ್ಮ ಭಾಗ್ಯ. ರಾಮ ಜನ್ಮಭೂಮಿಗಾಗಿ, ಧರ್ಮದ ಉಳಿವಿಗಾಗಿ ಹಲವು ಜನರು ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ಶಿಲ್ಪಿ ಅರುಣ್ ಯೋಗಿರಾಜ್ ತಾಯಿ ಸರಸ್ವತಿ ಮಾತನಾಡಿ, ಮಗನ ಕೆಲಸ ತುಂಬಾ ಸಂತೋಷ ತಂದಿದೆ. ಇಡೀ ಜಗತ್ತೇ ಇದನ್ನು ಗಮನಿಸುತ್ತಿದೆ. ದೊಡ್ಡವರ ಆಶೀರ್ವಾದ ಮತ್ತು ಪೂರ್ವ ಜನ್ಮದ ಪುಣ್ಯದಿಂದ ನಮಗೆ ಈ ಕೆಲಸ ಸಿಕ್ಕಿದೆ. ಇದರಿಂದಾಗಿ ನನ್ನ ಮಗ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದಾನೆ. ಇಡೀ ದೇಶವೇ ರಾಮ ಮಂದಿರ ಉದ್ಘಾಟನೆಗೆ ಕಾಯುತ್ತಿದೆ. ಕಳೆದ ಆರು ತಿಂಗಳಿನಿಂದ ಮಗ ಅಯೋಧ್ಯೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ತೀಚೆಗೆ ಮೈಸೂರಿಗೆ ಬಂದು ನಮ್ಮನ್ನು ಭೇಟಿ ಮಾಡಿ ಹೋಗಿದ್ದ. ಕಳೆದ ನಾಲ್ಕು ತಲೆಮಾರಿನಿಂದಲೂ ನಾವು ಇದೇ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಶಿಲ್ಪಿ ಅರುಣ್ ಯೋಗಿರಾಜ್ ಸಾಧನೆ :ಮೈಸೂರಿನ ಶಿಲ್ಪಿ ಕುಟುಂಬದಲ್ಲಿ ಜನಿಸಿದ ಅರುಣ್ ಯೋಗಿರಾಜ್ ಕುಟುಂಬ ನಾಲ್ಕು ತಲೆಮಾರಿನಿಂದಲೂ ಶಿಲ್ಪಗಳ ಕೆತ್ತನೆ ವೃತ್ತಿ ಮಾಡಿಕೊಂಡು ಬರುತ್ತಿದೆ. ಅರುಣ್ ಯೋಗಿರಾಜ್ ಅವರ ತಾತ ಶಿಲ್ಪಿ ಬಸವಣ್ಣ, ತಂದೆ ಯೋಗಿರಾಜ್ ಶಿಲ್ಪಿ ಹಾಗೂ ಈಗ ಅರುಣ್ ಯೋಗಿರಾಜ್ ಶಿಲ್ಪ ಕೆತ್ತನೆಯಲ್ಲಿ ತೊಡಗಿಸಿಕೊಂಡು ಬರುತ್ತಿದ್ದಾರೆ. ಅರಮನೆಯ ಕೆಲವು ಪ್ರತಿಮೆಗಳನ್ನು ಇವರ ಕುಟುಂಬವೇ ಕೆತ್ತನೆ ಮಾಡಿದ್ದರಿಂದ ಇವರ ತಾತನಿಗೆ ಮಹಾರಾಜರು ಅರಮನೆಯ ಹತ್ತಿರ ಜಾಗ ನೀಡಿದ್ದರು. ಈ ಜಾಗದಲ್ಲಿ ಮನೆ ಕಟ್ಟಿಕೊಂಡು ಈಗ ವಾಸ ಮಾಡುತ್ತಿದ್ದಾರೆ.

ಅರುಣ್ ಯೋಗಿರಾಜ್​ಗೆ ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ವಿಶೇಷ ಆಸಕ್ತಿ ಇತ್ತು. ಶಾಲೆಗೆ ಹೋದರೆ ಅಲ್ಲೇ ಸೀಮೆ ಸುಣ್ಣದಿಂದ ಚಿತ್ರಕಲೆ ಬಿಡಿಸುತ್ತಿದ್ದರು. ಅರುಣ್​ಗೆ ಕಲೆ ರಕ್ತಗತವಾಗಿ ಬಂದಿದೆ ಎಂದು ತಾಯಿ ಸರಸ್ವತಿ ವಿವರಿಸುತ್ತಾರೆ.

ಅರುಣ್ ಯೋಗಿರಾಜ್ ಇಲ್ಲಿಯವರೆಗೆ 1500 ರಿಂದ 2000 ಪ್ರತಿಮೆಗಳನ್ನು ಕೆತ್ತಿದ್ದಾರೆ. ಅದರಲ್ಲಿ ಮೈಸೂರಿನ ಹಾರ್ಡಿಂಜ್ ಸರ್ಕಲ್​ನಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ, ಟೌನ್ ಹಾಲ್​ನಲ್ಲಿರುವ ಅಂಬೇಡ್ಕರ್ ಪ್ರತಿಮೆ, ಮೈಸೂರಿನ ಪಾರಂಪರಿಕ ರೈಲ್ವೆ ನಿಲ್ದಾಣದಲ್ಲಿರುವ ಲೈಫ್ ಇಸ್ ಜರ್ನಿ ಪ್ರತಿಮೆಗಳು ಸೇರಿದಂತೆ ಹಲವು ಪ್ರಮುಖ ಪ್ರತಿಮೆಗಳನ್ನು ಇವರು ಕೆತ್ತಿದ್ದಾರೆ.

ಇದರ ಜೊತೆಗೆ ಹಲವು ದೇವಾಲಯಗಳಿಗೆ ದೇವರ ಮೂರ್ತಿಗಳನ್ನು ಕೆತ್ತಿದ್ದಾರೆ. ಮುಖ್ಯವಾಗಿ ದೆಹಲಿಯ ಇಂಡಿಯಾ ಗೇಟ್​ನಲ್ಲಿರುವ ಸುಭಾಷ್ ಚಂದ್ರ ಬೋಸ್, ಉತ್ತರಾಖಂಡ್​ನಲ್ಲಿರುವ ಆದಿಶಂಕರಚಾರ್ಯರ ಪ್ರತಿಮೆ ದೇಶಾದ್ಯಂತ ಗಮನ ಸೆಳೆದಿದ್ದವು. ಈ ಎರಡೂ ಪ್ರತಿಮೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದು, ಶಿಲ್ಪಿ ಅರುಣ್ ಯೋಗಿರಾಜ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಅಯೋಧ್ಯೆಯಲ್ಲಿ ಅರುಣ್​ ಕೆತ್ತನೆ ಮಾಡಿರುವ ರಾಮಲಲ್ಲಾ ಮೂರ್ತಿ ಆಯ್ಕೆ ಆಗಿ ಪ್ರಧಾನಿ ಉದ್ಘಾಟನೆ ಮಾಡಿದರೆ, ಒಟ್ಟು ಮೂರು ಪ್ರತಿಮೆಗಳನ್ನು ಉದ್ಘಾಟನೆ ಮಾಡಿದ ಕೀರ್ತಿಗೆ ಶಿಲ್ಪಿ ಅರುಣ್ ಯೋಗಿರಾಜ್ ಪಾತ್ರರಾಗಲಿದ್ದಾರೆ.

ಅರಮನೆಯ ಹತ್ತಿರ ಇರುವ ಮನೆಯ ಮುಂಭಾಗದಲ್ಲಿ ಅವರ ಸೋದರ ಹಾಗೂ ಸಂಬಂಧಿಕರು ಶಿಲ್ಪಗಳ ಕೆತ್ತನೆ ಕೆಲಸವನ್ನು ಮಾಡುತ್ತಿದ್ದು, ಪ್ರತಿನಿತ್ಯ ಹಲವು ವಿಗ್ರಹಗಳನ್ನು ಕೆತ್ತನೆ ಮಾಡುತ್ತಾರೆ.

ಇದನ್ನೂ ಓದಿ :51 ಇಂಚಿನ ಎತ್ತರದ 5 ವರ್ಷದ ರಾಮ ಲಲ್ಲಾ ವಿಗ್ರಹ ಸ್ಥಾಪನೆಗೆ ನಿರ್ಧಾರ: ದೇವಾಲಯ ಟ್ರಸ್ಟ್

Last Updated : Jan 1, 2024, 9:43 PM IST

ABOUT THE AUTHOR

...view details