ಮೈಸೂರು:ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ. ಚುನಾವಣೆ ಸಮೀಪಿಸುತ್ತಿದ್ದಂತೆ ಮತಬೇಟೆಯ ಅಬ್ಬರವೂ ಜೋರಾಗುತ್ತಿದೆ. ಚುನಾವಣೆಗೆ ನಿಂತ ಅಪ್ಪಂದಿರ ಪರವಾಗಿ ಮಕ್ಕಳು, ಗಂಡಂದಿರ ಪರವಾಗಿ ಪತ್ನಿಯರು ಹಗಳಿರುಳು ಶ್ರಮಿಸುತ್ತಿದ್ದಾರೆ. ಮೈಸೂರಿನಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪತ್ನಿಯರು ಮತದಾರರ ಮನೆ ಬಾಗಿಲು ಬಡಿದು ಮತ ಯಾಚಿಸುತ್ತಿದ್ದಾರೆ.
ಕೆ.ಆರ್.ನಗರ ಕ್ಷೇತ್ರದಲ್ಲಿ ಮಾಜಿ ಸಚಿವ ಜೆಡಿಎಸ್ ಅಭ್ಯರ್ಥಿ ಸಾ.ರಾ ಮಹೇಶ್ ಪರವಾಗಿ ಪತ್ನಿ ಅನಿತಾ ಮಹೇಶ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಪತ್ನಿ ಸುನೀತಾ ರವಿಶಂಕರ್ ಬಿರುಸಿನ ಮತ ಬೇಟೆಯಲ್ಲಿ ತೊಡಗಿದ್ದಾರೆ. ಹೆಚ್.ಡಿ.ಕೋಟೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರ ಪತ್ನಿ ಸೌಮ್ಯ ಅವರು ಕೂಡ ಗಂಡನನ್ನು ಎರಡನೇ ಬಾರಿಗೆ ಗೆಲ್ಲಿಸಲು ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೇ, ಕುಟುಂಬಸ್ಥರು ಹಾಗೂ ಸಂಬಂಧಿಗಳ ಮನೆ ಮನೆಗಳಿಗೆ ತೆರಳಿ ಮತ್ತೊಮ್ಮೆ ಆಶೀರ್ವಾದ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಲ್ಲಿ ಸಾ.ರಾ.ಮಹೇಶ್ ವಿರುದ್ಧ ರವಿಶಂಕರ್ ಪರಾಭವಗೊಂಡಿದ್ದರು. ಸೋಲಿನ ನೋವನ್ನು ಗೆಲುವಿನ ಮೂಲಕ ಮರೆಯಬೇಕೆಂದು ಪಣ ತೊಟ್ಟಂತಿರುವ ರವಿಶಂಕರ್ ಕ್ಷೇತ್ರ ಸಂಚಾರ ಮಾಡುತ್ತಿದ್ದಾರೆ. ಇವರಿಗೆ ಪತ್ನಿ ಸಾಥ್ ನೀಡುತ್ತಿದ್ದಾರೆ. ಕೆ.ಆರ್.ನಗರದ ಹಲವೆಡೆಗಳಲ್ಲಿ ಭರವಸೆಯ ಹಾದಿಯಲ್ಲಿ ಹೊಸ ಭವಿಷ್ಯದ ಬೆಳಕು ಎಂಬ ಅಭಿವೃದ್ಧಿ ಕೈಪಿಡಿ ವಿತರಿಸಿ ಮತದಾರರನ್ನು ಸಾ.ರಾ.ಮಹೇಶ್ ಹಾಗೂ ಪತ್ನಿ ಅನಿತಾ ಮಹೇಶ್ ಸೆಳೆಯುತ್ತಿದ್ದಾರೆ.
ಅಪ್ಪಂದಿರನ್ನು ಗೆಲುವಿನ ದಡ ಸೇರಿಸಲು ಮಕ್ಕಳೂ ಅಖಾಡಕ್ಕಿಳಿದಿದ್ದಾರೆ. ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಹುಣಸೂರು ಕ್ಷೇತ್ರದಲ್ಲಿ ಶಾಸಕ ಹೆಚ್.ಪಿ.ಮಂಜುನಾಥ್ ಪುತ್ರ ಪವನ್, ಟಿ.ನರಸೀಪುರದಿಂದ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್, ಚಾಮುಂಡೇಶ್ವರಿ ಕ್ಷೇತ್ರದಿಂದ ಕಾಂಗ್ರೆಸ್ ಮಾಜಿ ಶಾಸಕ ವಾಸು ಪುತ್ರ ಕವೀಶ್ ಗೌಡ, ಹುಣಸೂರು ಕ್ಷೇತ್ರದಿಂದ ಶಾಸಕ ಜಿ.ಟಿ.ದೇವೇಗೌಡ ಪುತ್ರ ಹರೀಶ್ ಗೌಡ, ಪಿರಿಯಾಪಟ್ಟಣ ಕ್ಷೇತ್ರದಿಂದ ಶಾಸಕ ಕೆ.ಮಹದೇವ ಪುತ್ರ ಪ್ರಸನ್ನ, ಕೆ.ಆರ್.ನಗರ ಕ್ಷೇತ್ರದಿಂದ ಶಾಸಕ ಸಾ.ರಾ.ಮಹೇಶ್ ಪುತ್ರ ಸಾ.ರಾ.ಜಯಂತ್, ಹೆಚ್.ಡಿ.ಕೋಟೆ ಕ್ಷೇತ್ರದಿಂದ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್. ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿ ಮಾಜಿ ಶಾಸಕ ದಿವಂಗತ ಎಸ್.ಚಿಕ್ಕಮಾದು ಪುತ್ರಿ ರಂಜಿತಾ ಚುನಾವಣೆ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.
ಶಾಸಕ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡ ಅವರೀಗಾಗಲೇ ಹುಣಸೂರಿನಲ್ಲಿ ತಾನೇ ಅಭ್ಯರ್ಥಿಯೆಂದು ಘೋಷಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರ ಸಂಚಾರ ಮಾಡುತ್ತಿದ್ದಾರೆ. ಹೆಚ್.ಡಿ.ಕೋಟೆಯಲ್ಲಿ ಜೆಡಿಎಸ್ ಸಂಭಾವ್ಯ ಅಭ್ಯರ್ಥಿಯಾಗಿರುವ ಜಯಪ್ರಕಾಶ್ ಹಾಗೂ ಕೃಷ್ಣನಾಯಕರ ನಡುವೆ ಯಾರಿಗೆ ಟಿಕೆಟ್ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಚಿಕ್ಕಮಾದು ಅವರ ಪುತ್ರಿ ರಂಜಿತಾ ಕೂಡ ಜೆಡಿಎಸ್ ಸೇರ್ಪಡೆಗೊಂಡಿದ್ದು ಲೆಕ್ಕಾಚಾರ ಬದಲಾಗುವ ಸಾಧ್ಯತೆಯೂ ಹೆಚ್ಚಳವಾಗಿದೆ.
ಇದನ್ನೂ ಓದಿ:ರಾಜ್ಯ ರಾಜಕೀಯಕ್ಕೆ ಮಾರ್ಗರೆಟ್ ಆಳ್ವಾ ರೀ ಎಂಟ್ರಿ: ಮಗನಿಗೆ ರಾಜಕೀಯ ನೆಲೆ ಕಲ್ಪಿಸಲು ಅಮ್ಮನ ಕಸರತ್ತು..