ಮೈಸೂರು: ಸಮುದಾಯಗಳ ನಡುವೆ ಬೇರು ಬಿಟ್ಟಿರುವ ಜಾತಿಯ ಎಂಬ ಗುಮ್ಮ ಜನರ ಮನಸ್ಸಿನಿಂದ ದೂರ ಯಾವಾಗ ಆಗುತ್ತೆ ಎಂಬುದಕ್ಕೆ ಉತ್ತರ ಇಲ್ಲದಂತಾಗಿದೆ. ಕಾರಣ ಜಿಲ್ಲೆಯ ಗ್ರಾಮವೊಂದರಲ್ಲಿ ಪಾನಿಪುರಿ ತಿನ್ನಲು ತಮ್ಮ ಕೇರಿಗೆ ಪರಿಶಿಷ್ಟ ಜಾತಿಯವರು ಬಂದರು ಎಂಬ ಕ್ಷುಲ್ಲಕ ವಿಷಯವನ್ನೇ ದೊಡ್ಡದು ಮಾಡಿದ ಕೆಲವರು ಅವರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರು ಮಂದಿ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಗ್ರಾಮದ ಮೂರ್ತಿ, ಸಚಿನ್, ನವೀನ್, ಮಹದೇವಸ್ವಾಮಿ, ಚಂದನ್, ಸಂತೋಷ್ ಬಂಧಿತರು. ಹಲ್ಲೆಗೊಳಗಾಗಿರುವ ಸೌಭಾಗ್ಯ, ದಿಲೀಪ್, ಚಂದನ್, ಮಧುಕರ, ಪ್ರಸನ್ನ ಅವರು ಮೈಸೂರಿನ ಕೆ. ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಹಿನ್ನೆಲೆ: ದಿಲೀಪ್, ಪ್ರಸನ್ನ ಮತ್ತು ಮಧುಕರ ಅವರು ಪಾನಿಪುರಿ ತಿನ್ನಲೆಂದು ಗುರುವಾರ ರಾತ್ರಿ 7.30ಕ್ಕೆ ಕೇರಿಗೆ ತೆರಳಿದ್ದರು. ಅದನ್ನು ಆಕ್ಷೇಪಿಸಿದ್ದ ಮೂರ್ತಿ, ಸಚಿನ್ ಹಲ್ಲೆ ನಡೆಸಿದ್ದರು. ನಂತರ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಸಂಧಾನವೂ ನಡೆದಿತ್ತು.