ಮೈಸೂರು: ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಎಚ್.ಡಿ. ಕೋಟೆ ತಾಲ್ಲೂಕಿನ ಅಣ್ಣೂರು ಗ್ರಾಮದಲ್ಲಿ ನಡೆದಿದೆ. ಹಲ್ಲೆ ಖಂಡಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ, ಆರೋಪಿ ವಿರುದ್ಧ ಎಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಎಚ್.ಡಿ. ಕೋಟೆ ತಾಲ್ಲೂಕಿನ ಅಣ್ಣೂರು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾದ ಮಂಗಳಮ್ಮ ಎಂಬವರು ಸರ್ಕಾರದ ಆದೇಶದ ಮೇರೆಗೆ ಗ್ರಾಮದ ಮನೆಮನೆಗೆ ತೆರಳಿ ಇ- ಸಮೀಕ್ಷೆ ನಡೆಸಲು ಮಾಹಿತಿ ಕಲೆ ಹಾಕುತ್ತಿದ್ದರು. ಗ್ರಾಮದಲ್ಲಿನ ಮನೆಯೊಂದರಲ್ಲಿ ಮಾಹಿತಿ ಕಲೆಹಾಕುತ್ತಿದ್ದಾಗ ಪಕ್ಕದ ಮನೆಯ ಮಾದೇಶ ಎಂಬ ವ್ಯಕ್ತಿ ಅಲ್ಲಿಗೆ ಬಂದು ಮಂಗಳಮ್ಮ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾನೆ. ಮಂಗಳಮ್ಮರಿಗೆ ನೆರವಾಗಲು ಶಿವಕುಮಾರ್ ಎಂಬ ಯುವಕ ಮಧ್ಯಪ್ರವೇಶಿಸಿದ್ದು, ಮಾದೇಶ ಆತನ ಮೇಲೂ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಇಬ್ಬರನ್ನು ಎಚ್.ಡಿ. ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಹಲ್ಲೆಗೊಳಗಾದ ಮಂಗಳಮ್ಮ ಅವರು ಮಾತನಾಡಿ, "ಸರ್ಕಾರದ ಆದೇಶದಂತೆ ನಾನು ಮನೆಮನೆಗೆ ತೆರಳಿ ಇ- ಸಮೀಕ್ಷೆ ಮಾಡುತ್ತಿದೆ. ಹೀಗೆ ಮಹದೇವ ನಾಯ್ಕ ಅವರ ಮನೆಯಲ್ಲೂ ಸಮೀಕ್ಷೆ ಮಾಡುತ್ತಿದ್ದೆ. ಮಾದೇಶ ಪಕ್ಕದಲ್ಲೇ ಇದ್ದ, ಅವನಿಗೂ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಕೊಡು ನಿಮ್ಮ ಮನೆ ಸರ್ವೇ ಮಾಡಬೇಕು ಎಂದು ಹೇಳಿದೆ. ಆಗ ಆತ, ಎಂತ ಸರ್ವೇ ಮಾಡ್ತೀರಾ, ಎಲ್ಲ ಸರ್ವೇ ಮಾಡೋಕು ನಂಗೊತ್ತು, ನೀವೇನು ಮಾಡ್ಸೋದು ಹೋಗಿ ಎಂದು ಹೇಳಿದ. ಅದರ ನಂತರ ನಾನೇನು ಮಾತಾಡ್ಸಿಲ್ಲ, ಅವನೇ ಕೆಟ್ಟದಾಗಿ, ತುಂಬಾ ಕೆಟ್ಟದಾಗಿ ಬೈದ. ಆಗ ನಾನು ಯಾಕೆ ಅಷ್ಟೊಂದು ಕೆಟ್ಟದಾಗಿ ಬೈಯ್ತಾ ಇದ್ದೀಯಾ ಅಂತ ಕೇಳಿದೆ. ಆಗ ಹತ್ತಿರಕ್ಕೆ ಬಂದು ಕೆನ್ನೆಗೆ ಹೊಡೆದ, ಆಗ ಪಕ್ಕದಲ್ಲೇ ಇದ್ದ ಹುಡುಗ ಸಹಾಯಕ್ಕೆ ಬಂದ, ಆಗ ಅವನ ಮೇಲೂ ಹಲ್ಲೆ ನಡೆಸಿದ್ದಾನೆ" ಎಂದು ಹೇಳಿದ್ದಾರೆ.