ಮೈಸೂರು: ಅತ್ಯಾಧುನಿಕ ಸೆಮಿಕಂಡಕ್ಟರ್ ಉದ್ದಿಮೆಯನ್ನು ನಗರದಲ್ಲಿ ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 2023 ರ ಫೆಬ್ರುವರಿ ವೇಳೆಗೆ ಅನುಮೋದನೆ ಪ್ರಕ್ರಿಯೆ ಮುಗಿಯಲಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ್ ಹೇಳಿದರು.
ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಪೂರ್ವಭಾವಿಯಾಗಿ ಬುಧವಾರ ರಾತ್ರಿ ಹಲವು ಸ್ಥಳೀಯ ಕಂಪನಿ ಸಿಇಒಗಳ ಜತೆ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಸಮಾಲೋಚನೆ ನಡೆಸಿದರು.
ಸ್ಥಳೀಯ ಕಂಪನಿ ಸಿಇಒಗಳ ಜತೆ ಅಶ್ವತ್ಥ ನಾರಾಯಣ್ ಸಭೆ ಸೆಮಿಕಂಡಕ್ಟರ್ ಫ್ಯಾಬ್ ಕಂಪನಿಗೆ ಈಗಾಗಲೇ ಸ್ಥಳ ಗುರುತಿಸಿ, ಭೂಮಿಯನ್ನು ಮೀಸಲಿಡಲಾಗಿದೆ. ಆದರೆ, ಕಂಪನಿ ಸ್ಥಾಪನೆಗೆ ಅಗತ್ಯವಾದ ಅನುಮತಿ ಪ್ರಕ್ರಿಯೆಗೆ 14 ತಿಂಗಳು ಹಿಡಿಯುತ್ತದೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಜತೆ ಮಂಗಳವಾರ ದೆಹಲಿಯಲ್ಲಿ ಈ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸೈಬರ್ ಸೆಕ್ಯೂರಿಟಿ ಕುರಿತ ಉದ್ದಿಮೆ ಮೈಸೂರಿನಲ್ಲಿ ಬೃಹತ್ತಾಗಿ ಬೆಳೆಯಲು ಸೂಕ್ತ ಪರಿಸರ ನಿರ್ಮಿಸಲಾಗುತ್ತಿದೆ. ನಮ್ಮಲ್ಲಿ ಅತ್ಯಂತ ವೇಗವಾಗಿ ನಡೆಯುತ್ತಿರುವ ಡಿಜಿಟಲೀಕರಣ ಮತ್ತು ಉನ್ನತ ಶಿಕ್ಷಣ ಸುಧಾರಣೆ ಇದಕ್ಕೆ ವೇಗವರ್ಧಕದ ರೀತಿಯಲ್ಲಿ ಕೆಲಸ ಮಾಡಲಿವೆ ಎಂದು ವಿವರಿಸಿದರು.
ಇದನ್ನೂ ಓದಿ:ಮೈಸೂರಿನಲ್ಲಿ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆಗೆ ಅನುಮೋದನೆ : ಇದರ ಉಪಯೋಗಗಳೇನು ?
ಉನ್ನತ ಶಿಕ್ಷಣದಲ್ಲಿ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯಗಳನ್ನು ಒಂದು ಸಂಸ್ಕೃತಿಯಾಗಿ ತರಲಾಗುತ್ತಿದೆ. ಪರಿಣಾಮವಾಗಿ ಶಿಕ್ಷಣ ಸಂಸ್ಥೆಗಳು ಇಂದು ನೇರವಾಗಿ ಉದ್ಯಮಗಳ ಜತೆ ಸಕ್ರಿಯ ಮತ್ತು ರಚನಾತ್ಮಕ ಸಹಭಾಗಿತ್ವ ಹೊಂದುತ್ತಿವೆ. ಮೈಸೂರಿನ ಉದ್ಯಮಿಗಳು ಶಿಕ್ಷಣ ಸಂಸ್ಥೆಗಳ ಜೊತೆ ಅರ್ಥಪೂರ್ಣ ಸಂಬಂಧ ಸ್ಥಾಪಿಸಿ ಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ ವಿ ನಾಯ್ಡು ಮುಂತಾದವರು ಉಪಸ್ಥಿತರಿದ್ದರು.