ಮೈಸೂರು: ಜನವರಿ 22ರಂದು ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಗೊಳ್ಳಲಿರುವ ಮೂರ್ತಿ ಆಯ್ಕೆಯಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಕೆತ್ತಿರುವ ರಾಮಲಲ್ಲಾ ಮೂರ್ತಿಯನ್ನು ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಟಾಪನೆ ಮಾಡಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಂತೆ, ಮೈಸೂರಿನ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಬಗ್ಗೆ ಯೋಗಿರಾಜ್ ತಾಯಿ ಸರಸ್ವತಿ ಹಾಗೂ ಪತ್ನಿ ವಿಜೇತ ಯೋಗಿರಾಜ್ ತಮ್ಮ ಸಂತಸವನ್ನು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.
ಯೋಗಿರಾಜ್ ತಾಯಿ ಸರಸ್ವತಿ ಸಂತಸ: ಸಂಕ್ರಾಂತಿಯ ದಿನ ಈ ರೀತಿಯ ಸುದ್ದಿ ನಮಗೆ ತುಂಬಾ ಖುಷಿ ಕೊಟ್ಟಿದೆ. 500 ವರ್ಷಗಳ ಇತಿಹಾಸ ಈಗ ಪೂರ್ತಿಯಾಗಿದೆ. ನನ್ನ ಮಗ ಮಾಡಿರುವ ಮೂರ್ತಿ ಆಯ್ಕೆ ಆಗಿದ್ದು ತುಂಬಾ ಖಷಿ ತಂದಿದೆ. ಮೂರ್ತಿ ಕೆತ್ತುವಾಗ ಸಣ್ಣ ಸಣ್ಣ ಕಲ್ಲುಗಳನ್ನು ತೆಗೆದುಕೊಂಡು ಬೇರೆ ಮೂರ್ತಿಗಳನ್ನು ಮಾಡಿದ್ದಾರೆ. ಶ್ರೀ ರಾಮ ಮೂರ್ತಿ ಕೆತ್ತನೆಗೆ ಎಚ್.ಡಿ ಕೋಟೆಯ ಕೃಷ್ಣ ಶಿಲೆ ಆಯ್ಕೆಯಾಗಿತ್ತು. ಆ ಕಲ್ಲನ್ನು ಕಳುಹಿಸಿಕೊಡುವಾಗ ನಾನು ಅದಕ್ಕೆ ಪೂಜೆ ಮಾಡಿ ಕಳುಹಿಸಿಕೊಟ್ಟಿದ್ದೆ. ಈಗ ಆ ಶಿಲೆಯಲ್ಲಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಆಯ್ಕೆ ಆಗಿರುವುದು ಸಾರ್ಥಕವಾಯಿತು ಎಂದು ತಾಯಿ ಸರಸ್ವತಿ ಸಂತಸ ಪಟ್ಟಿದ್ದಾರೆ. ಇದರ ಜೊತೆಗೆ ತಮ್ಮ ಮಗ, ರಾಮಲಲ್ಲಾ ಮೂರ್ತಿಯನ್ನು ಕೆತ್ತುವಾಗ ಅನುಭವಿಸಿದ ಕಷ್ಟ ಹಾಗೂ ಇಲ್ಲಿಯವರೆಗೆ ಕೆತ್ತಿರುವ ಪ್ರಸಿದ್ಧವಾದ ಮೂರ್ತಿಗಳ ವಿವರವನ್ನು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.
ಹೆಂಡತಿ ವಿಜೇತ ಅರುಣ್ ಯೋಗಿರಾಜ್ ಹೇಳಿಕೆ: ಅರುಣ್ ಯೋಗಿರಾಜ್ ಕೆತ್ತಿರುವ ಮೂರ್ತಿ ಆಯ್ಕೆ ಆಗಿದ್ದು ತುಂಬಾ ಖುಷಿ ತಂದಿದೆ. ಈ ಕೆಲಸ ಮಾಡುವ ಪುಣ್ಯ ನಮಗೆ ದೊರಕಿದೆ. ಜೀವನ ಸಾರ್ಥಕವಾಯಿತು. 6 ತಿಂಗಳ ಹಿಂದೆ ಅರುಣ್ ಅಯೋಧ್ಯೆಗೆ ಹೋದಾಗ, ಇಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಯಿತು, ಈಗ ಮೂರ್ತಿ ಆಯ್ಕೆ ಆಗಿದ್ದು ಜೊತೆಗೆ ಸಂಕ್ರಾಂತಿಯ ದಿನ ಈ ಶುಭ ಸುದ್ದಿ ಬಂದಿದ್ದು ನಮಗೆ ಮತ್ತಷ್ಟು ಸಂತೋಷ ತಂದಿದೆ ಎಂದು ಹೇಳಿದರು.