ಕರ್ನಾಟಕ

karnataka

ETV Bharat / state

ದಸರಾ 2023: ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸುತ್ತಿರುವ ಕಲಾವಿದರು

Dasara 2023 cultural events: ರಾಜ್ಯ ಮಾತ್ರವಲ್ಲದೇ ದೇಶ ವಿದೇಶಗಳಿಂದ ಕಲಾವಿದರು ಸ್ವಯಂ ಪ್ರೇರಣೆಯಿಂದ ದಸರಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ ಡಿ ಸುದರ್ಶನ್ ತಿಳಿಸಿದ್ದಾರೆ.

mysuru dasara 2023
ದಸರಾ 2023

By

Published : Aug 19, 2023, 2:21 PM IST

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಲವು ಕಲಾವಿದರು ಮತ್ತು ಕಲಾ ತಂಡಗಳು ಈಗಾಗಲೇ ಅರ್ಜಿ ಸಲ್ಲಿಸುತ್ತಿದ್ದಾರೆ. ದೇಶ ವಿದೇಶಗಳಿಂದ ಅನೇಕ ಕಲಾವಿದರು ಮೈಸೂರಿನ ಕಲಾಮಂದಿರದಲ್ಲಿರುವ ಕಚೇರಿಗೆ ನೇರವಾಗಿ ಮತ್ತು ಅಂಚೆಯ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ ಡಿ.ಸುದರ್ಶನ್ ತಿಳಿಸಿದ್ದಾರೆ.

ದಸರಾದಲ್ಲಿ ಜರುಗುವ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ವೀರಗಾಸೆ, ಕತ್ತಿಕುಣಿತ , ಕರಡಿ ಕುಣಿತ, ಕಂಸಾಳೆ, ನಂದಿಧ್ವಜ, ನಗಾರಿ, ಬುಡಕಟ್ಟು ಮತ್ತು ಜಾನಪದ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಕಾತರದಿಂದ ಕಾಯುತ್ತಿವೆ. ಈ ಹಿನ್ನೆಲೆ ನಾಡಹಬ್ಬ ದಸರಾದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನೇಕ ಕಲಾವಿದರು ಮತ್ತು ಕಲಾ ತಂಡಗಳು ಸಿದ್ಧತೆ ನಡೆಸುತ್ತಿರುವ ಜೊತೆಗೆ ಅರ್ಜಿ ಸಲ್ಲಿಸುತ್ತಿವೆ.

ರಾಜ್ಯ ಮಾತ್ರವಲ್ಲದೇ ದೇಶ ವಿದೇಶಗಳಿಂದ ಅರ್ಜಿ ಸಲ್ಲಿಕೆ :ಈ ಬಾರಿಯ ದಸರಾದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಮ್ಮ ರಾಜ್ಯದ ಕಲಾವಿದರು ಮಾತ್ರವಲ್ಲದೇ ಹೊರ ರಾಜ್ಯಗಳಾದ ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಪ್ರತಿಭೆಗಳು ಮತ್ತು ಕಲಾತಂಡಗಳು ಅರ್ಜಿ ಸಲ್ಲಿಸಿವೆ. ಇದರ ಜೊತೆಗೆ ವಿದೇಶಗಳಿಂದಲೂ ಸಹ ಅರ್ಜಿ ಸಲ್ಲಿಸಲಾಗುತ್ತಿದೆ. ದಸರಾದಲ್ಲಿ ಪಾಲ್ಗೊಳ್ಳುವ ಹಲವು ಕಲಾವಿದರು ತಮ್ಮ ಪ್ರತಿಭೆ ತೋರಿಸುವ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಇದು ವೇದಿಕೆಯಾಗಿದೆ. ಇಲ್ಲಿ ನೀಡುವ ಪ್ರಮಾಣ ಪತ್ರವನ್ನು ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುತ್ತಾರೆ.

ಕಳೆದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಲಾವಿದರು ಮತ್ತು ಕಲಾತಂಡಗಳಿಂದ ಸುಮಾರು 611 ಅರ್ಜಿಗಳು ಸಲ್ಲಿಕೆಯಾಗಿದ್ದವು. ಪೌರಾಣಿಕ, ಸಾಮಾಜಿಕ, ಐತಿಹಾಸಿಕ ನಾಟಕಗಳಿಂದ 96 ಅರ್ಜಿ, ಸಂಗೀತಗಾರರು ಮತ್ತು ಜಾನಪದ ಕಲಾವಿದರಿಂದ 409 ಅರ್ಜಿ, ವಿವಿಧ ನೃತ್ಯ ಕಲಾವಿದರಿಂದ ಸುಮಾರು 93 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅಲ್ಲದೇ ಸಂಯೋಜಿಸಲು 6 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು.

ಈ ಬಾರಿಯ ದಸರಾಕ್ಕೆ ಸಹ ಕಳೆದ ಬಾರಿಗಿಂತ ಹೆಚ್ಚಿನ ಅರ್ಜಿಗಳು ಬರುವ ನಿರೀಕ್ಷೆ ಇದೆ. ಸರ್ಕಾರದಿಂದ ಇನ್ನೂ ದಸರಾ ಉಪ ಸಮಿತಿಯಾಗಿಲ್ಲ, ಸಮಿತಿ ಅಂತಿಮವಾದ ನಂತರ ಇಲಾಖೆಯಿಂದ ಸಭೆ ನಡೆಸಿ ನಂತರ ಕಲಾವಿದರು ಮತ್ತು ಕಲಾತಂಡಗಳಿಗೆ ಅರ್ಜಿ ಆಹ್ವಾನಕ್ಕೆ ಪತ್ರಿಕೆಗಳ ಮೂಲಕ ಪ್ರಕಟಣೆ ನೀಡಲಾಗುತ್ತದೆ‌. ಈಗಾಗಲೇ ರಾಜ್ಯವಲ್ಲದೇ, ದೇಶ ವಿದೇಶಗಳಿಂದ ಕಲಾವಿದರು ಸ್ವಯಂ ಪ್ರೇರಣೆಯಿಂದ ಅರ್ಜಿ ಸಲ್ಲಿಸುತ್ತಿದ್ದಾರೆ ಎಂ ಡಿ.ಸುದರ್ಶನ್ ಹೇಳಿದರು.

ಇದನ್ನೂ ಓದಿ :Mysore Dasara : ಜಂಬೂಸವಾರಿಯಂದು ಚಾಮುಂಡೇಶ್ವರಿಗೆ ಸರ್ಕಾರದಿಂದಲೇ ಸೀರೆ ಕೊಡಲಿ - ಪ್ರತಾಪ್​ ಸಿಂಹ

ಯಾವ್ಯಾವ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು : ಪ್ರತಿ ವರ್ಷ ದಸರಾ ಮಹೋತ್ಸವದ ನಿಮಿತ್ತ ಮೈಸೂರು ಅರಮನೆ ಆವರಣ, ಹುಣಸೂರು ರಸ್ತೆಯ ಕಲಾಮಂದಿರ, ಜಗನ್ಮೋಹನ ಅರಮನೆ ಸಭಾಂಗಣ, ಕುವೆಂಪುನಗರದ ಗಾನಭಾರತಿ, ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾ, ಟೌನ್‌ ಹಾಲ್‌ನಲ್ಲಿ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಇದರೊಟ್ಟಿಗೆ ನಗರದ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರ ಮತ್ತು ಚಿಕ್ಕ ಗಡಿಯಾರ ಗೋಪುರ (ಡಫರಿನ್ ಕ್ಲಾಕ್ ಟವರ್) ಮುಂಭಾಗವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. 2019 ರಿಂದ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಲಾಗುತ್ತಿರುವ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ದಿನದ ಕಾರ್ಯಕ್ರಮದಲ್ಲಿ ಮತ್ತಷ್ಟು ಕಲಾವಿದರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಕಲಾವಿದರಿಗೆ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿದೆ.

ABOUT THE AUTHOR

...view details