ಮೈಸೂರು :ಗಜಪಡೆ ಹಾಗೂ ಅಶ್ವಪಡೆಗಳಿಗೆ ಕುಶಾಲತೋಪು ಸಿಡಿಮದ್ದು ತಾಲೀಮು ನೀಡಲು ದಿನಗಣನೆ ಆರಂಭವಾಗಿದೆ. ಅರಮನೆ ಆವರಣದಲ್ಲಿರುವ ಫಿರಂಗಿಗಳಿಗೆ ಸಾಂಪ್ರದಾಯಿಕವಾಗಿ ಪೊಲೀಸ್ ಇಲಾಖೆ ವತಿಯಿಂದ ಪೂಜೆ ಸಲ್ಲಿಸಲಾಯಿತು.
ಅರಮನೆ ಆವರಣದಲ್ಲಿ ಫಿರಂಗಿ ಪೂಜೆ ಅರಮನೆಯ ಅಂಬಾವಿಲಾಸ ಮುಂಭಾಗ 10 ಫಿರಂಗಿ ಗಾಡಿಗಳಿಗೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಕುಶಾಲತೋಪು ತಾಲೀಮಿಗೆ ಹಸಿರು ನಿಶಾನೆ ತೋರಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಂಬೂಸವಾರಿಯ ವೇಳೆ ಕುಶಾಲತೋಪು ಸಿಡಿಸುವ ಸಂಪ್ರದಾಯವಿರುವುದರಿಂದ ತಾಲೀಮಿಗೆ ಸಿದ್ಧತೆ ಮಾಡಿಕೊಳ್ಳಲು ಫಿರಂಗಿಗಳಿಗೆ ಪೂಜೆ ಸಲ್ಲಿಸಲಾಗಿದೆ. ನಾಳೆಯಿಂದಲೇ ಸಿಬ್ಬಂದಿ ಒಣ (ಸಿಡಿಮದ್ದು ಬಳಸದೆ) ತಾಲೀಮು ಆರಂಭಿಸಲಿದ್ದಾರೆ ಎಂದು ತಿಳಿಸಿದರು.
ಡಿಸಿಪಿಗಳಾದ ಡಾ.ಎ ಎನ್ ಪ್ರಕಾಶಗೌಡ, ಗೀತಾ ಪ್ರಸನ್ನ, ಶಿವರಾಜ್, ಅರಮನೆ ಭದ್ರತೆ ಪಡೆ ಪೊಲೀಸ್, ಸಿಎಆರ್ ಪೊಲೀಸರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.