ಮೈಸೂರು: ಈ ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡ ಇನ್ನೇನು ನಗರಕ್ಕೆ ಆಗಮಿಸಲಿದೆ.
ಈ ಬಾರಿ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ವಿವರ ಇಂತಿದೆ: ಇದೇ ಚೊಚ್ಚಲ ಬಾರಿಗೆ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯು(54) ಮತ್ತಿಗೂಡು ಆನೆ ಶಿಬಿರದಿಂದ ಬರುತ್ತಿದ್ದಾನೆ. ಮಾವುತ ವಸಂತ ಕಾವಾಡಿ ರಾಜುವಿನ ಮಾತಿಗೆ ತಲೆ ಅಲ್ಲಾಡಿಸಲಿದೆ. ಎತ್ತರ 2.68 ಮೀಟರ್, ಉದ್ದ 3.51 ಮೀಟರ್, ತೂಕ 5,000 ದಿಂದ 5,290 ಕೆ.ಜಿ. ಇದ್ದಾನೆ. 1977 ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. 21 ವರ್ಷಗಳಿಂದ ದಸರಾದಲ್ಲಿ ಭಾಗಿಯಾಗುತ್ತಿರುವ ಈತ 2015ರಿಂದ ಕರ್ನಾಟಕ ವಾದ್ಯಗೋಷ್ಠಿಯ ಗಾಡಿ ಎಳೆಯುತ್ತಿದ್ದ. ಈ ವರ್ಷ ಈತನಿಗೆ ಅಂಬಾರಿ ಹೊರುವ ಅದೃಷ್ಟ ಒಲಿದು ಬಂದಿದೆ.
ವಿಕ್ರಮ ಆನೆ: 47 ವರ್ಷದ ವಿಕ್ರಮ ಆನೆಯನ್ನು ದುಬಾರೆ ಆನೆ ಶಿಬಿರ ಕರೆತರಲಾಗಿದೆ. ಮಾವುತ ಜೆ ಕೆ ಪುಟ್ಟ, ಕಾವಾಡಿಗ ಹೇಮಂತ್ ಕುಮಾರ್ ಈ ಆನೆಯನ್ನು ನೋಡಿಕೊಳ್ಳಲಿದ್ದಾರೆ. ಎತ್ತರ 2.60 ಮೀ, ಉದ್ದ 3.43 ಮೀ, ತೂಕ 3,820 ಕೆ.ಜಿ. ಇದ್ದಾನೆ. 1990 ರಲ್ಲಿ ದೊಡ್ಡ ಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. 16 ವರ್ಷಗಳಿಂದ ದಸರಾದಲ್ಲಿ ಭಾಗಿಯಾಗುತ್ತಿರುವ ಈತ, 2015 ರಿಂದ ಪಟ್ಟದ ಆನೆಯಾಗಿ ಅರಮನೆ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ.