ಮೈಸೂರು : ದಸರಾ 2023ಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಹಬ್ಬಕ್ಕೆ ದಿನಗಣನೆ ಆರಂಭಗೊಂಡಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಬಳಿ ಇರುವ ಗಜಪಡೆ ಶಿಬಿರದಲ್ಲಿ ಮಾಜಿ ಜಂಬೂ ಸವಾರಿಯ ಕ್ಯಾಪ್ಟನ್ ಹಾಗೂ ಹಿರಿಯ ಆನೆ ಅರ್ಜುನ ಮತ್ತು ರಾಜ ವಂಶಸ್ಥರ ಶರನ್ನವರಾತ್ರಿಯಲ್ಲಿ ಪಟ್ಟದ ಆನೆಯಾಗಿರುವ ಭೀಮ ಸದ್ಯಕ್ಕೆ ಶಿಬಿರದಲ್ಲಿ ಪರಸ್ಪರ ಮಸ್ತಿಯಲ್ಲಿ ತೊಡಗಿದ್ದು, ಅದರ ವಿಡಿಯೋ ಝಲಕ್ ಇಲ್ಲಿದೆ.
ಮೈಸೂರು ದಸರಾದ ಗಜಪಡೆಯಲ್ಲಿ ಆಕರ್ಷಕ ಮೈಕಟ್ಟು ಹೊಂದಿರುವ ಅರ್ಜುನ ಆನೆ ಹಾಗೂ ಅರಮನೆಯ ರಾಜ ವಂಶಸ್ಥರ ಶರನ್ನವರಾತ್ರಿಯ ಪಟ್ಟದ ಆನೆಯಾಗಿರುವ ಭೀಮ ಆನೆ ಶಿಬಿರದಲ್ಲಿ ದಷ್ಟಪುಷ್ಟ ಆಹಾರವನ್ನು ತಿಂದು, ಸ್ನಾನ ಮಾಡಿ ಬಳಿಕ ಜಂಬೂ ಸವಾರಿ ತಾಲೀಮು ಮುಗಿಸಿಕೊಂಡು ಶಿಬಿರಕ್ಕೆ ಆಗಮಿಸಿದ್ದವು. ಈ ವೇಳೆ ಅರ್ಜುನ - ಭೀಮ ಪರಸ್ಪರ ಸ್ನೇಹ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.
ಈ ಬಾರಿಯ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಅತ್ಯಂತ ಹಿರಿಯ ಗಂಡು ಆನೆ ಎಂಬ ಖ್ಯಾತಿ ಪಡೆದಿರುವ ಹಾಗೂ 8 ಬಾರಿಗೂ ಹೆಚ್ಚು ಬಾರಿ ಜಂಬೂ ಸವಾರಿಯನ್ನು ಯಶಸ್ವಿಯಾಗಿ ಹೊತ್ತಿರುವ ಅರ್ಜುನ ನಾಗರಹೊಳೆಯ ಹುಲಿ ಸಂರಕ್ಷಿತ ಬಳ್ಳೆ ಆನೆ ಶಿಬಿರದಿಂದ ಆಗಮಿಸಿದೆ. ಇದರ ಜೊತೆಗೆ ಕಿರಿಯ ವಯಸ್ಸಿನ ಸದೃಢ ಮೈಕಟ್ಟು ಹೊಂದಿರುವ ಭೀಮ ಆನೆ ರಾಜ ವಂಶಸ್ಥರ ಶರನ್ನವರಾತ್ರಿಯಲ್ಲಿ ಪಟ್ಟದ ಆನೆಯಾಗಿ ಆಯ್ಕೆಯಾಗಿದ್ದು, ಇದು ನಾಗರಹೊಳೆಯ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿದೆ.