ಮೈಸೂರು :ಐಟಿ ಕ್ಷೇತ್ರದಲ್ಲಿ ವಿಶ್ವದ ಗಮನವನ್ನ ಸೆಳೆದಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೇಶದ ಮೊಟ್ಟ ಮೊದಲ ಸೆಮಿಕಂಡಕ್ಟರ್ ಘಟಕ ತಲೆ ಎತ್ತಲಿದೆ. ಎಲೆಕ್ಟ್ರಾನಿಕ್ ಉಪಕರಣಗಳನ್ನ ತಯಾರು ಮಾಡುವ ಸೆಮಿಕಂಡಕ್ಟರ್ ಕೋರ್ ಯೂನಿಟ್ನನ್ನ ಮೈಸೂರಿನಲ್ಲಿ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಮೂಲಕ ಮಲ್ಲಿಗೆ ನಗರಿ ಎಲ್ಲರ ಗಮನವನ್ನ ಸೆಳೆದಿದೆ.
ಭಾರತ ಹಾಗೂ ಇಸ್ರೇಲ್ ನಡುವಿನ ಪರಸ್ಪರ ಒಪ್ಪಂದದ ಮೇಲೆ ದೇಶದಲ್ಲಿ ಮೊದಲ ಸೆಮಿಕಂಡಕ್ಟರ್ ಘಟಕ ಸ್ಥಾಪನೆ ಆಗಲಿದೆ. ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಬಳಸುವ ಬಿಡಿ ಭಾಗಗಳನ್ನ ಸೆಮಿಕಂಡಕ್ಟರ್ ಯುನಿಟ್ನಲ್ಲಿ ಉತ್ಪಾದಿಸಲಾಗುತ್ತದೆ. ಇಂತಹ ಒಂದು ಘಟಕವನ್ನ ಸ್ಥಾಪನೆ ಮಾಡುವುದರಿಂದ ಬೇರೆ ದೇಶಗಳನ್ನ ಅವಲಂಬಿಸುವುದು ತಪ್ಪುತ್ತದೆ. ಈ ಘಟಕದಲ್ಲಿ ಲ್ಯಾಪ್ಟಾಪ್, ಕಂಪ್ಯೂಟರ್, ಮೊಬೈಲ್, ಆಟೋಮೋಬೈಲ್, ಎಲ್ಸಿಡಿ, ಟಿವಿ, ಸಿಸಿಟಿವಿ ಉತ್ಪಾದನೆಗೆ ಕಚ್ಛಾ ವಸ್ತುಗಳು ಕೂಡ ದೊರೆಯಲಿವೆ.
ಮೈಸೂರು ಆಯ್ಕೆಯಾಗಲು ಕಾರಣವೇನು?: ಕೆಆರ್ಎಸ್ ಹಾಗೂ ಕಬಿನಿ ಜಲಾಶಯದಿಂದ ಯಥೇಚ್ಛ ನೀರಿನ ಸಂಪನ್ಮೂಲ, ವಿದ್ಯುತ್ ಕೊರತೆ ಇಲ್ಲದಿರುವುದು ಮತ್ತು ಇನ್ಫೋಸಿಸ್, ವಿಪ್ರೊ, ಎಲ್ ಅಂಡ್ ಟಿ ಇನ್ನಿತರ ಎಂಎನ್ಸಿ ಕಂಪನಿಗಳನ್ನ ಹೊಂದಿರುವುದು. ಅದಷ್ಟೇ ಅಲ್ಲದೇ ಬೆಂಗಳೂರು-ಮೈಸೂರು ದಶಪಥ ರಸ್ತೆ ಹಾಗೂ ವಿಮಾನ ನಿಲ್ದಾಣದ ಸಂಪರ್ಕ ಮೈಸೂರನ್ನ ಅರಿಸಿಕೊಳ್ಳಲು ಮುಖ್ಯ ಕಾರಣವಾಗಿದೆ.
ಸುಮಾರು ಹತ್ತು ಸಾವಿರ ಜನರಿಗೆ ಉದ್ಯೋಗ :ಈ ಸೆಮಿಕಂಡಕ್ಟರ್ ಕೋರ್ನಲ್ಲಿ ನುರಿತ ಇಂಜಿನಿಯರ್ಗಳು ಕೆಲಸ ಮಾಡಲಿದ್ದಾರೆ. 1,500 ರಿಂದ 2,200 ಜನರಿಗೆ ನೇರವಾಗಿ ಕೆಲಸ ಸಿಗಲಿದೆ. ಆಂತರಿಕವಾಗಿ 10,000 ಜನರಿಗೆ ಉದ್ಯೋಗ ದೊರೆಯಲಿದೆ. ಘಟಕ ಸ್ಥಾಪನೆಗೆ ಮೂರು ಮಿಲಿಯನ್ ಡಾಲರ್ (22.900 ಕೋಟಿ ರೂ) ನನ್ನು ಬಂಡವಾಳವಾಗಿ ಹೂಡಿಕೆ ಮಾಡಲಾಗಿದೆ.
ಸಂಸ್ಥೆಗೆ ಬೇಕಿದೆ 150 ಎಕರೆ ಜಾಗ :ಸೆಮಿ ಕಂಡಕ್ಟರ್ ಘಟಕ ಸ್ಥಾಪನೆಯಾಗಲು ಇನ್ನೂ ಆರು ತಿಂಗಳು ಬೇಕು. ಇಸ್ರೇಲ್ನ ಐಎಸ್ಎಂಸಿ ಅನಲಾಗ್ ಪ್ಯಾಬ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪನೆ ಮಾಡಲು ಒಪ್ಪಂದ ಮಾಡಿಕೊಂಡಿದೆ. ಶೀಘ್ರವಾಗಿ ತನ್ನ ಕಚೇರಿ ಶುರು ಮಾಡಿದರೂ ಕೂಡ ಕೆಲಸ ಪ್ರಾರಂಭ ಮಾಡುವ ಹೊತ್ತಿಗೆ ಆರು ತಿಂಗಳು ಹಿಡಿಯಬಹುದು. ಸಂಸ್ಥೆಗೆ 150 ಎಕರೆ ಜಾಗ ಬೇಕಿದ್ದು, ಮುಂಬರುವ ದಿನಗಳಲ್ಲಿ ಸರ್ಕಾರ ಮಂಜೂರು ಮಾಡಲಿದೆ.