ಮೈಸೂರು: ಜೂನ್ 27ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಆ ಸಭೆಯಲ್ಲಿ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಸಿದ್ಧಪಡಿಸಲಾಗಿರುವ ಆ್ಯಪ್ಅನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ತೋರಿಸಿ ನಂತರ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಆಗಸ್ಟ್ 17ರ ನಂತರದಿಂದ ಫಲನಾಭವಿಗಳ ಹಣ ಹಾಕುತ್ತೇವೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಅರ್ಜಿ ಸಲ್ಲಿಕೆಗೆ ಯಾವ ಶುಲ್ಕವೂ ಇರುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆ್ಯಪ್ ರಚಿಸಿದ್ದೇವೆ. ಒಂದು ರೂಪಾಯಿ ಹಣವನ್ನು ಅರ್ಜಿ ಸಲ್ಲಿಕೆಗೆ ಕೊಡಬೇಡಿ. ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಸಿಕ್ಕರೆ ಅಲ್ಲಿಗೆ ನೀವು ಫಲಾನುಭವಿ ಪಟ್ಟಿಗೆ ಸೇರುತ್ತೀರಾ. ಇದರಲ್ಲಿ ಯಾವುದೇ ಗೊಂದಲಗಳು ಬೇಡ. ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಹಣಕಾಸಿನ ತೊಂದರೆ ಇದೆ ಎಂಬ ಮಾತಿಗೆ ಅರ್ಥ ಇಲ್ಲ. ಎಲ್ಲಾ ರೀತಿಯ ಸಂಪನ್ಮೂಲಗಳು ನಮ್ಮ ಬಳಿ ಇವೆ ಎಂದರು.
ಹರಕೆ ತೀರಿಸಿದ ಸಚಿವೆ:ಸಚಿವೆಯಾದ ನಂತರ ಮೊದಲ ಬಾರಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಅವರಿಗೆ ಆಡಳಿತ ಮಂಡಳಿಯಿಂದ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಆನಂತರ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಚಾಮುಂಡಿ ತಾಯಿಯಲ್ಲಿ ಹರಕೆ ಕಟ್ಟಿಕೊಂಡಿದ್ದೆ. ಈಗ ಅಧಿಕಾರಕ್ಕೆ ಬಂದಿದ್ದೇವೆ. ಹೀಗಾಗಿ ಚಾಮುಂಡಿ ಬೆಟ್ಟಕ್ಕೆ ಬಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆಯನ್ನು ತೀರಿಸಿದ್ದೇನೆ. ತಾಯಿಯಲ್ಲಿ ರಾಜ್ಯಕ್ಕೆ ಒಳ್ಳೆಯ ಮಳೆಯಾಗಲಿ ಎಂದು ದೇವಿ ಮುಂದೆ ಸೆರೆಗೊಡ್ಡಿ ಬೇಡಿಕೊಂಡಿದ್ದೇನೆ ಎಂದು ಹೇಳಿದರು.