ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2023 ರ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಜನಪ್ರಿಯ 'ಆಹಾರ ಮೇಳ'ವನ್ನು ಅಕ್ಟೋಬರ್ 15 ರಿಂದ 22 ರವರೆಗೆ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಎಲ್ಲಾ ವರ್ಗದ ಜನರ ಅಭಿರುಚಿಯನ್ನು ಗಮನದಲ್ಲಿರಿಸಿಕೊಂಡು ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಉಣಬಡಿಸಲು ನಿರ್ಧರಿಸಲಾಗಿದೆ. ಮೇಳದಲ್ಲಿ ದೇಶಿಯ ಮತ್ತು ಖಂಡಾಂತರ ಆಹಾರ ಪದ್ಧತಿಯ ಜೊತೆ ಪ್ರಾದೇಶಿಕ ಮತ್ತು ಹೊರ ರಾಜ್ಯಗಳ ವೈವಿಧ್ಯದ ಉಟೋಪಚಾರಗಳೂ ಇರಲಿವೆ.
ಸಮಕಾಲೀನ ಆಹಾರ ಅಭ್ಯಾಸಗಳು ಮತ್ತು ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿಕೊಂಡು ಸಹಜ, ನೈಸರ್ಗಿಕ, ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧಾನ್ಯಗಳು, ಹಣ್ಣು-ಹಂಪಲು, ತರಕಾರಿ ಕಾಯಿ ಪಲ್ಯಗಳಿಂದ ತಯಾರಿಸಿದ ಅಡುಗೆಗಳು ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳನ್ನು ಆಹಾರ ಮೇಳದಲ್ಲಿ ಉಣಬಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಸಿರಿಧಾನ್ಯ ಬೆಳೆಗಾರರು, ಸಹಜ ಮತ್ತು ನೈಸರ್ಗಿಕ ಕೃಷಿಕರು, ಸಾವಯವ ಕೃಷಿಕರು ಹಾಗೂ ಸಿರಿಧಾನ್ಯ ಬೆಳೆಗಾರರ ಸಂಘಗಳು ಮತ್ತು ಒಕ್ಕೂಟಗಳು ಆಹಾರ ಮೇಳಗಳಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ. ಸಿರಿಧಾನ್ಯ ಅಡುಗೆ ತಯಾರಿಸಲು, ಸಹಜ ಮತ್ತು ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣು ಮತ್ತು ತರಕಾರಿ ಮಾರಾಟಗಾರರುಗಳಿಗೆ ಎರಡು ಆಹಾರ ಮೇಳಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.
ವಿವಿಧ ಶೈಲಿಯ ಆಹಾರ ಪದ್ದತಿಗಳು: ಆಹಾರ ಮೇಳದಲ್ಲಿ ದಕ್ಷಿಣ ಕರ್ನಾಟಕ ಆಹಾರ ಪದ್ಧತಿ, ಉತ್ತರ ಕರ್ನಾಟಕ ಆಹಾರ ಪದ್ಧತಿ, ಟಿಬೆಟಿಯನ್ ಆಹಾರ ಪದ್ಧತಿ, ಹೊರ ರಾಜ್ಯದ ಆಹಾರ ಪದ್ಧತಿಯಡಿಯಲ್ಲಿ ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ ಆಹಾರ ಪದ್ಧತಿ, ಆಂಧ್ರ ಶೈಲಿ, ಕೇರಳ ಶೈಲಿ, ತಮಿಳುನಾಡು ಶೈಲಿ, ಮರಾಠಿ ಶೈಲಿಯಲ್ಲಿನ ಸಸ್ಯಾಹಾರಿ ಮತ್ತು ಶಾಖಾಹಾರಿ ಆಹಾರ ಪದ್ಧತಿ ಶೈಲಿಯ ಜೊತೆಗೆ ಅಂತರ್ರಾಷ್ಟ್ರೀಯ ಚೈನೀಸ್ ಆಹಾರ ಪದ್ಧತಿ ಶೈಲಿ, ಇಟಾಲಿಯನ್ ಆಹಾರ ಪದ್ಧತಿ ಶೈಲಿ, ಫ್ರೆಂಚ್ ಆಹಾರ ಪದ್ಧತಿ ಹಾಗೂ ಆಫ್ರಿಕನ್ ಆಹಾರ ಪದ್ಧತಿಯಡಿಯಲ್ಲಿ ಆಹಾರ ತಯಾರಿಸುವ ಅಡುಗೆಗಳು ಮತ್ತು ಸಿರಿಧಾನ್ಯ ಮತ್ತು ಸಹಜ ಹಾಗೂ ಸಾವಯವ ಧಾನ್ಯಗಳು ಮತ್ತು ತರಕಾರಿಗಳಲ್ಲಿ ಅಡುಗೆಗಳನ್ನು ಮಾಡುವ ವ್ಯಕ್ತಿಗಳು, ಗೃಹಿಣಿಯರು, ಹೋಟೆಲ್ಗಳು ಹಾಗೂ ಸಂಘ ಸಂಸ್ಥೆಗಳು, ಹೋಟೆಲ್ರವರು, ರೆಸ್ಟೊರೆಂಟ್ನವರು ಮತ್ತು ಇತರೆಯವರು ಭಾಗವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.