ಮೈಸೂರು: ಜಿಲ್ಲೆಯ ಬುಡಕಟ್ಟು ಜನರು ಉತ್ಪಾದಿಸುವ ಉತ್ಪನ್ನಗಳಿಗೆ 'ಮೈಸೂರು ಟ್ರೈಬಲ್' ಎಂಬ ಬ್ರಾಂಡ್ ನೀಡಿ, ಭಾರತೀಯ ಬುಡಕಟ್ಟು ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ (ಟೈಫೈಡ್) ಸಂಸ್ಥೆಯ ಮುಖಾಂತರ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಟೈಫೈಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರವೀರ್ ಕೃಷ್ಣ ಅವರಿಗೆ ಮನವಿ ಮಾಡಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಭಾರತೀಯ ಬುಡಕಟ್ಟು ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟದ (ಟೈಫೈಡ್) ವ್ಯವಸ್ಥಾಪಕ ನಿರ್ದೇಶಕ, ಹಿರಿಯ ಐಎಎಸ್ ಅಧಿಕಾರಿ ಪ್ರವೀರ್ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ವಾಸವಿರುವ ಬುಡಕಟ್ಟು ಜನರು ಉತ್ಪಾದಿಸುವ ವಸ್ತುಗಳಿಗೆ ಸೂಕ್ತ ಬೆಲೆ ನೀಡಲು ಚರ್ಚಿಸಿದರು.
ಹುಣಸೂರು ತಾಲೂಕು ಪಕ್ಷಿರಾಜಪುರದಲ್ಲಿ ವಾಸಿಸುವ ಬುಡಕಟ್ಟು ಜನರು ಉತ್ಪಾದಿಸುವ ಎಣ್ಣೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ಬುಡಕಟ್ಟು ಜನರಿಗೆ ತರಬೇತಿ ನೀಡಿ ಅವರ ಉತ್ಪನ್ನಗಳಿಗೆ (ಟ್ರೇಡ್) ನಿಗದಿಪಡಿಸಿ ಅಭಿವೃದ್ಧಿಪಡಿಸಬೇಕು ಎಂದು ವಿವರಿಸಿದರು.
ಜಿಲ್ಲಾ ಮಟ್ಟದಲ್ಲಿ ತ್ರೈಮಾಸಿಕವಾಗಿ ಬುಡಕಟ್ಟು ಜನರ ಉತ್ಪನ್ನಗಳ ಪ್ರದರ್ಶನಾಲಯ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ತಿಳಿಸಿದರು. ನಾಗಾಪುರ, ಪಕ್ಷಿರಾಜಪುರ ಸೇರಿದಂತೆ ಹುಣಸೂರು ತಾಲೂಕಿನ ಪ್ರದೇಶಗಳಲ್ಲಿ ಬರುವ ಬುಡಕಟ್ಟು ಜನರಿಗೆ ಮಾರುಕಟ್ಟೆ ಒದಗಿಸಲು ಜಿಲ್ಲಾ ಯೋಜನಾ ವರದಿ ಸಿದ್ಧಪಡಿಸಲು ಚರ್ಚಿಸಿದರು.
ಟೈಫೈಡ್ ವ್ಯವಸ್ಥಾಪಕ ನಿರ್ದೇಶಕ ಪ್ರವೀರ್ ಕೃಷ್ಣ ಮಾತನಾಡಿ, ಈ ಬಗ್ಗೆ ತಾಂತ್ರಿಕ ಯೋಜನಾ ವರದಿಯನ್ನು ತಯಾರಿಸಲು ಕೂಡಲೇ ತಂತ್ರಜ್ಞರನ್ನು ನಿಯೋಜಿಸಲಾಗುವುದು. ಜಿಲ್ಲಾ ತಾಂತ್ರಿಕ ಯೋಜನಾ ವರದಿಯನ್ನು 15 ದಿನಗಳ ಒಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.