ಮೈಸೂರು: ಪಕ್ಷದಲ್ಲಿ ಯಾರು ಎಷ್ಟೇ ಹಿರಿಯರಾದರೂ ಹೈ ಕಮಾಂಡ್ ನಿರ್ಧಾರಕ್ಕೆ ತಲೆ ಬಾಗಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಬಿ ಕೆ. ಹರಿಪ್ರಸಾದ್ ಅವರ ಸಚಿವ ಸ್ಥಾನ ಸಿಗದಿದ್ದಕ್ಕೆ ರಾಜಿನಾಮೆ ನೀಡುತ್ತೇನೆ ಎಂಬ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ರೈಲ್ವೆ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಇಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ವಿಧಾನ ಪರಿಷತ್ ಸದಸ್ಯ ಬಿ ಕೆ. ಹರಿಪ್ರಸಾದ್ ಅವರು, ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ತಾವು ಏನು ಹೇಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ವೀರಪ್ಪ ಮೊಯ್ಲಿ, ಬಿ ಕೆ. ಹರಿಪ್ರಸಾದ್ ಅವರಿಗೆ ಹೇಳುವಂತದ್ದು ಏನೂ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಎಷ್ಟೇ ಹಿರಿಯಾದರೂ, ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಲೇಬೆಕು. ಅವರ ನಿರ್ಧಾರಕ್ಕೆ ತಲೆ ಬಾಗಲೇಬೇಕು ಎಂದು ವೀರಪ್ಪ ಮೊಯ್ಲಿ ಹೇಳಿದರು.
ಗ್ಯಾರಂಟಿಗೆ ಕೆಲವು ಮಾನದಂಡಗಳು ಇರುತ್ತವೆ:ಕಾಂಗ್ರೆಸ್ ಪಕ್ಷ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಈ ಗ್ಯಾರಂಟಿ ಯೋಜನೆಗಳು ಖಂಡಿತವಾಗಿ ಜಾರಿಗೆ ಬರುತ್ತವೆ. ಈ ವಿಚಾರದಲ್ಲಿ ಆತುರ ಬೇಡ. ಗ್ಯಾರಂಟಿ ಕೊಡುವುದು ಪಕ್ಷ ಅಲ್ಲ ಸರ್ಕಾರ. ಗ್ಯಾರಂಟಿ ಯೋಜನೆ ಜಾರಿಗೆ ಒಂದಿಷ್ಟು ಮಾನದಂಡಗಳು ಇರುತ್ತವೆ. ಅವುಗಳನ್ನು ಫಿಕ್ಸ್ ಮಾಡಿ ನಂತರ ಜಾರಿ ಮಾಡುತ್ತೇವೆ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.