ಮೈಸೂರು: ಜಿಲ್ಲೆಯಲ್ಲಿ ಚಿರತೆಗಳ ದಾಳಿಗೆ ಮತ್ತೊಂದು ಬಲಿಯಾಗಿದೆ. ತಿ. ನರಸೀಪುರ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ ದಾಳಿ ನಡೆಸಿದ ನರಹಂತಕ ಚಿರತೆ, ಗ್ರಾಮದ ಸಿದ್ದಮ್ಮ ಎಂಬ 60 ವರ್ಷದ ವೃದ್ಧೆಯನ್ನು ಸಾಯಿಸಿದೆ. ಮೂರನೇ ಬಲಿ ಇದಾಗಿದೆ. ಸಿದ್ದಮ್ಮ ಮನೆಯಾಚೆಯಿದ್ದ ಸೌದೆ ತರಲೆಂದು ಹೊರಗೆ ಬಂದಿದ್ದ ವೇಳೆ ಚಿರತೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.
ದಾಳಿ ಮಾಡಿದ್ದಲ್ಲದೇ ವೃದ್ಧೆ ಸಿದ್ದಮ್ಮಳನ್ನ ಎಳೆದೊಯ್ದಿದೆ. ಈ ವೇಳೆ ಗ್ರಾಮಸ್ಥರು ಕಿರುಚಾಡಿದ ಹಿನ್ನೆಲೆ ಸ್ಥಳದಲ್ಲಿಯೇ ಮಹಿಳೆಯ ದೇಹ ಬಿಟ್ಟು ಕಾಲ್ಕಿತ್ತಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಡೆದು ಗಂಟೆಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಸಿದ್ದಮ್ಮಳ ಮೃತ ದೇಹವನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡುವ ಸಾಧ್ಯತೆ ಇದೆ.
ತಿ. ನರಸೀಪುರ ತಾಲೂಕಿನಲ್ಲಿ ಕೆಲ ತಿಂಗಳುಗಳ ಹಿಂದೆ ಚಿರತೆ ದಾಳಿಗೆ ಇಬ್ಬರು ಬಲಿ:ಕಳೆದ ವರ್ಷ ಅಕ್ಟೋಬರ್ 31ರಂದು ತಿ. ನರಸೀಪುರ ತಾಲೂಕಿನ ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಬಳಿ ಚಿರತೆ ದಾಳಿಗೆ ಯುವಕ ಬಲಿಯಾಗಿದ್ದ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಮಂಜುನಾಥ್ (18) ಎಂಬಾತ ಅಸುನೀಗಿದ್ದ. ಮಲ್ಲಪ್ಪನ ಬೆಟ್ಟದ ಸಮೀಪದ ಮುದ್ದು ಮಾರಮ್ಮ ದೇವಾಲಯದ ಬಳಿ ಸ್ನೇಹಿತರ ಜೊತೆಗೆ ಪೂಜೆಗೆಂದು ಹೋಗಿದ್ದ ವೇಳೆ ಚಿರತೆ ದಾಳಿ ನಡೆಸಿ ಕೊಂದಿತ್ತು. ಪೊದೆಯಿಂದ ಜಿಗಿದ ಚಿರತೆ ಮಂಜುನಾಥ್ ಮೇಲೆ ದಾಳಿ ನಡೆಸಿ, ಎಳೆದಾಡಿ ಕತ್ತಿನ ನಾಳ ಕಚ್ಚಿ ರಕ್ತ ಹೀರಿತ್ತು. ಸ್ನೇಹಿತರು ಕಲ್ಲು ಹೊಡೆದು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ಗ್ರಾಮಸ್ಥರಿಗೆ ವಿಷಯ ತಿಳಿಸಿ, ಅವರು ಬಂದು ನೋಡುವಷ್ಟರಲ್ಲಿ ಮಂಜುನಾಥ್ ಮೃತಪಟ್ಟಿದ್ದ.
ಘಟನೆ ಬಳಿಕ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಶಶಿಧರ್, ಬನ್ನೂರು ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿದ್ದರು. ಅಲ್ಲದೆ, ಶಾಸಕ ಎಂ. ಅಶ್ವಿನ್ ಕುಮಾರ್ ಕೂಡ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಿಗಬಹುದಾದ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದ್ದರು. ಆದರೆ ಇದಾದ ಬಳಿಕವೂ ತಿ. ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ಯುವಕ ಮಂಜುನಾಥ್ ಸಾವು ಘಟನೆ ಮಾಸುವ ಮುನ್ನವೇ ಮತ್ತೊಂದು ಕಡೆ ಚಿರತೆ ದಾಳಿ ನಡೆದಿತ್ತು. ತಿ. ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ಮೇಘನಾ (22) ಎಂಬ ಯುವತಿ ಡಿಸೆಂಬರ್ 1ರಂದು ಚಿರತೆ ದಾಳಿಗೆ ಬಲಿಯಾಗಿದ್ದಳು. ಹಿತ್ತಲಿಗೆ ಹೋಗಿದ್ದ ವೇಳೆ ಚಿರತೆ ದಾಳಿ ನಡೆಸಿತ್ತು. ಬಳಿಕ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದ ಯುವತಿ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಳು.
ಇದನ್ನೂ ಓದಿ: ತಾಯಿಗೊಂದಿಗೆ ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಬಲಿ ಪಡೆದ ಚಿರತೆ