ಕರ್ನಾಟಕ

karnataka

ETV Bharat / state

ಸ್ಯಾಂಟ್ರೋ ರವಿಗೆ ಮತ್ತೊಂದು ಸಂಕಷ್ಟ: ಹೊಸ ಪ್ರಕರಣ ದಾಖಲಿಸಿದ ಎರಡನೇ ಪತ್ನಿ - ಸ್ಯಾಂಟ್ರೋ ರವಿ ಪತ್ನಿ

ಸ್ಯಾಂಟ್ರೋ ರವಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅವರ ಎರಡನೇ ಪತ್ನಿ ಹೊಸ ಪ್ರಕರಣ ದಾಖಲಿಸಿದ್ದಾರೆ.

ಸ್ಯಾಂಟ್ರೋ ರವಿ
ಸ್ಯಾಂಟ್ರೋ ರವಿ

By

Published : Jan 17, 2023, 12:12 PM IST

Updated : Jan 17, 2023, 1:23 PM IST

ಮೈಸೂರು:ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಹೊಸ ಕೇಸ್ ದಾಖಲಾಗಿದೆ. ಚೆಕ್ ಕಳ್ಳತನ ಸಂಬಂಧ ಮೈಸೂರಿನ ದೇವರಾಜ ಪೊಲೀಸ್ ಸ್ಟೇಷನ್​​ನಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಅವರ ಎರಡನೇ ಪತ್ನಿ ಸೋಮವಾರ ದೂರು ನೀಡಿದ್ದಾರೆ. ಅವರು ಪೊಲೀಸರಿಗೆ ನೀಡಿರುವ ದೂರಿನ ವಿವರ ಇಲ್ಲಿದೆ.

"ಸೆಪ್ಟೆಂಬರ್ 22, 2022 ರಂದು ನಾನು ಮೈಸೂರಿನ ದೇವರಾಜ ಮಾರ್ಕೆಟ್​ಗೆ ಹೋಗಿದ್ದೆ. ನನ್ನ ಸ್ಕೂಟರ್ ಡಿಕ್ಕಿಯಲ್ಲಿ ಚೆಕ್ ಬುಕ್ ಇಟ್ಟಿದ್ದೆ. ಸ್ಯಾಂಟ್ರೋ ರವಿ ಮತ್ತು ಪ್ರಕಾಶ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಚೆಕ್ ಬುಕ್ ಕಳವು ಮಾಡಿದ್ದಾರೆ. ಬಳಿಕ ನನ್ನ ಚೆಕ್ ಬುಕ್ ದುರುಪಯೋಗ ಮಾಡಿಕೊಂಡಿದ್ದಾರೆ. ನಾನು ಸೈನ್ ಮಾಡಿರುವ ಎರಡು ಚೆಕ್​ ಅನ್ನು ಕೆನರಾ ಬ್ಯಾಂಕ್​​ಗೆ ನೀಡಿದ್ದಾರೆ. ಇನ್ನೆರಡು ಚೆಕ್ ಹಾಗೆಯೇ ಇಟ್ಟುಕೊಂಡಿದ್ದಾರೆ‌. ಈ ಸಂಬಂಧ ದೇವರಾಜ ಪೊಲೀಸ್ ಸ್ಟೇಷನ್​​ನಲ್ಲಿ ಸೆಪ್ಟೆಂಬರ್ 24 ರಂದು ದೂರು ನೀಡಿದ್ದೆ" ಎಂದು ಪತಿ ವಿರುದ್ಧ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ಥೆ ನೀಡಿದ ದೂರು ಆಧರಿಸಿ ಸ್ಯಾಂಟ್ರೋ ರವಿ ವಿರುದ್ಧ ಐಪಿಸಿ 465, 468, 506, 420 ಹಾಗೂ 34 ಸೆಕ್ಷನ್​ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಿಐಡಿ ವಶಕ್ಕೆ ರವಿ?:ಅತ್ಯಾಚಾರ, ವೇಶ್ಯಾವಾಟಿಕೆ, ವಂಚನೆ, ಜಾತಿ ನಿಂದನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಮಂಜುನಾಥ್ ಕೆ‌.ಎಸ್. ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಿಐಡಿ ಡಿವೈಎಸ್ಪಿ ನೇತೃತ್ವದ ನಾಲ್ವರು ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಪೊಲೀಸ್ ತನಿಖಾಧಿಕಾರಿ ಎಸಿಪಿಯಿಂದ ದಾಖಲಾತಿ ವಶಕ್ಕೆ ಪಡೆದಿದ್ದಾರೆ. ಸ್ಯಾಂಟ್ರೋ ರವಿಯನ್ನು ತಮ್ಮ ವಶಕ್ಕೆ ನೀಡುವಂತೆ ಇಂದು ಮೈಸೂರು ಕೋರ್ಟ್​ಗೆ ಸಿಐಡಿ ಅಧಿಕಾರಿಗಳು ಅರ್ಜಿ ಸಲ್ಲಿಸಲಿದ್ದಾರೆ.

ಈ ಮೊದಲು ಸ್ಯಾಂಟ್ರೋ ರವಿ ವಿರುದ್ಧ ಆತನ ಎರಡನೇ ಪತ್ನಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಜ.2 ರಂದು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಜಾತಿ ನಿಂದನೆ ಮತ್ತು ವಂಚನೆ ಸಂಬಂಧ ಮೊದಲ ಪ್ರಕರಣ ದಾಖಲಾಗಿತ್ತು. ಸದ್ಯ ಮೈಸೂರಿನ ಪೊಲೀಸರು ತನಿಖೆ ನಡೆಸುತ್ತಿದ್ದು, ಇದೀಗ ಡಿಜಿ-ಐಜಿಪಿ ಆದೇಶದ ಬಳಿಕ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಸೂಚನೆ ನೀಡಿದ್ದರು.

ಗುಜರಾತ್​ನಲ್ಲಿ ಬಂಧನ:ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿದ್ದ ಸ್ಯಾಂಟ್ರೋ ರವಿ 11 ದಿನಗಳ ನಂತರ ಗುಜರಾತ್​ನಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದರು. ಬಳಿಕ ಗುಜರಾತ್​ನಿಂದ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ಕರೆತಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಿ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮೈಸೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಸ್ಯಾಂಟ್ರೊ ರವಿಯ ನ್ಯಾಯಾಂಗ ಬಂಧನವನ್ನು ಜನವರಿ 25ರ ವರೆಗೆ ವಿಸ್ತರಿಸಿ ನ್ಯಾಯಾಧೀಶರಾದ ಗುರುರಾಜ್ ಅವರು ಆದೇಶಿಸಿದ್ದರು. ಜೊತೆಗೆ ಪ್ರಕರಣದ ವಿಚಾರಣೆಯನ್ನು ಜ.18 ಕ್ಕೆ ಮುಂದೂಡಿದ್ದರು.

ಸ್ಯಾಂಟ್ರೋ ರವಿ ಪ್ರಕರಣ ಸಂಬಂಧ ರಾಜಕೀಯ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಪ ಮುಂದುವರಿಯುತ್ತಿದೆ. ಸ್ಯಾಂಟ್ರೋ ರವಿಯನ್ನು ಗುಜರಾತ್​ನಿಂದ ವಿಐಪಿ ಗೇಟ್ ಮೂಲಕ ಎಲ್ಲರ ಕಣ್ತಪ್ಪಿಸಿ ಕರೆತಂದದ್ದು ಏಕೆ?. ವಿಐಪಿ ಗೇಟ್ ಇರುವುದು ಪ್ರಧಾನಿ, ಮುಖ್ಯಮಂತ್ರಿಗಳಿಗೆ ಮಾತ್ರ. ಒಬ್ಬ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗೆ ಇಷ್ಟೊಂದೆಲ್ಲ ರಾಜಾತಿಥ್ಯ ಏಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.

Last Updated : Jan 17, 2023, 1:23 PM IST

ABOUT THE AUTHOR

...view details