ಮೈಸೂರು: "ರಾಷ್ಟ್ರಕ್ಕಾಗಿ ಶ್ರಮಿಸುತ್ತಿರುವ ಬಿಜೆಪಿಯನ್ನು ಈ ಬಾರಿ ಗೆಲ್ಲಿಸುವ ಮೂಲಕ ಕಾಂಗ್ರೆಸ್‌ಮುಕ್ತ ಕರ್ನಾಟಕದ ಸಂಕಲ್ಪ ಮಾಡಿ" ಎಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಸಾರ್ವಜನಿಕರಿಗೆ ಮನವಿ ಮಾಡಿದರು. ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಚಾಮರಾಜ ಹಾಗೂ ಕೃಷ್ಣರಾಜ ವಿಧಾನಸಭಾ ಕ್ಷೇತ್ರಗಳ ವಿಜಯಸಂಕಲ್ಪ ಯಾತ್ರೆಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
"ಕಾಂಗ್ರೆಸ್ ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ಹವಣಿಸುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳು ಕುಟುಂಬ ಆಧಾರಿತವಾಗಿವೆ. ಈ ದೇಶದಲ್ಲಿ ರಾಷ್ಟ್ರಕ್ಕಾಗಿ ಯಾವುದಾದರೂ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಕುಟುಂಬ ಅಧಿಕಾರ ಬಿಟ್ಟರೆ ದೇಶದ ಬಗ್ಗೆ ಅವರಿಗೆ ಚಿಂತನೆ ಇಲ್ಲ" ಎಂದರು.
"ಪ್ರಧಾನಿಯವರು ಎಂದೂ ಸಹ ತಮಗಾಗಿ ದುಡಿಯುತ್ತಿಲ್ಲ. ಅವರು ದೇಶದ ಸ್ಥಾನಮಾನವನ್ನು ವಿಶ್ವದರ್ಜೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ಬಾರಿ ರಾಜ್ಯದಲ್ಲೂ ಸಹ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು. ಅಭಿವೃದ್ಧಿಗೆ ಪೂರಕವಾದ ಪಕ್ಷಕ್ಕೆ ಮತ ಚಲಾಯಿಸಿ" ಎಂದು ಕರೆ ಕೊಟ್ಟರು.
ಮುಂದುವರೆದು ಮಾತನಾಡಿ, "ಈಶ್ವರಪ್ಪ ಐಡಿಯಾಲಿಸ್ಟಿಕ್ ಮ್ಯಾನ್. ಪ್ರತಾಪ್ ಸಿಂಹರಿಗೆ ಡೆವಲಪ್ಮೆಂಟ್ ಎಂಪಿ ಎಂದು ಹೆಸರಿದೆ. ರಾಮದಾಸ್ ಅವರು ಹಳೆಯ ಸೀನಿಯರ್ ಮಿನಿಸ್ಟರ್, ಮೈಸೂರಿನ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ನಾಗೇಂದ್ರ ಕೂಡ ಉತ್ಸಾಹಿ ಶಾಸಕರು. ಮೂರು ವರ್ಷದಲ್ಲಿ ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡಿದೆ" ಎಂದು ಹೇಳಿದರು. ಕಾಂಗ್ರೆಸ್ ಧರ್ಮ, ಜಾತಿ ಬಗ್ಗೆ ಮಾತನಾಡುತ್ತಾರೆ. ಅದನ್ನೆಲ್ಲ ಪ್ರಧಾನಿ ಮೋದಿ ಅಳಿಸಿ ಹಾಕಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲೂ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಭಾರತಾದ್ಯಂತ ಬೆಂಬಲ ದೊರೆತಂತೆ ಕರ್ನಾಟಕದಲ್ಲೂ ಬೆಂಬಲ ದೊರೆಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಪ್ರತಾಪಸಿಂಹ ಮಾತನಾಡಿ, "ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಅಂತ ಹೇಳಬೇಕಾಗಿಲ್ಲ. ನಾವು ಮಾಡಿರುವ ಯೋಜನೆಗಳು, ಕಾರ್ಯಕ್ರಮಗಳನ್ನು ವಿಜಯ ಸಂಕಲ್ಪ ಯಾತ್ರೆಯಲ್ಲಿ ಜನರಿಗೆ ತಿಳಿಸುವ ಕೆಲಸ ಮಾಡಿದರೆ ಜನರೇ ಮತ ಹಾಕುತ್ತಾರೆ. ಮೈಸೂರು ಮಹಾನಗರ ಪಾಲಿಕೆ ಬೃಹತ್ ಮೈಸೂರು ಮಹಾನಗರ ಪಾಲಿಕೆ ಆಗಲಿದೆ. ಹಳೆ ಉಂಡುವಾಡಿ ನೀರಿನ ಯೋಜನೆಗೆ ಕುಮಾರಸ್ವಾಮಿ ಹಾಗೂ ಜಿ.ಟಿ.ದೇವೇಗೌಡರ ಶ್ರಮ ಇರಬಹುದು. ಆದರೆ, ಅದಕ್ಕೆ ಹಣ ನೀಡಿದ್ದು ಯಡಿಯೂರಪ್ಪ ಅವರ ಸರ್ಕಾರ. ಯಡಿಯೂರಪ್ಪ, ಬೊಮ್ಮಾಯಿ ಅವರು ಮೈಸೂರಿಗೆ ಸಾಕಷ್ಟು ಅನುದಾನ ನೀಡಿದ್ದಾರೆ" ಎಂದರು.
"ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯರನ್ನು ಮೈಸೂರು ಜನ ಸೋಲಿಸಿದ್ದೀರಿ. ರಾಷ್ಟ್ರದ್ರೋಹಿ ಪಿಎಫ್ಐ ಯನ್ನು ಬ್ಯಾನ್ ಮಾಡಿದ್ದು ತಪ್ಪಾ? ಅಧಿಕಾರಕ್ಕೆ ಬಂದ ಮೇಲೆ ಬ್ಯಾನ್ ಮಾಡಿದ್ದನ್ನು ತೆಗೆಯುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಮತಾಂತರ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಗೋಹತ್ಯೆ ನಿಷೇಧ ಕಾಯ್ದೆ ತಂದರೆ, ಇನ್ನೊಂದೆಡೆ ಗೋಮಾಂಸ ತಿನ್ನುತ್ತೇನೆ ಎಂದು ಹೇಳುತ್ತಾರೆ. ಬಿಜೆಪಿ ಬಗ್ಗೆ ಕಾಂಗ್ರೆಸ್ಸಿಗರು ಬಹಳ ಹಗುರವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ನಾಯಕರಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಖರ್ಗೆ ಈ ಮೂವರು ಮೂರು ದಿಕ್ಕಿನಲ್ಲಿ ಇದ್ದಾರೆ" ಎಂದು ಟೀಕಿಸಿದರು.
ಇದನ್ನೂ ಓದಿ:ಭ್ರಷ್ಟಾಚಾರ ವಿರೋಧಿಸಿ ಮಾ. 9 ರಂದು ಕರ್ನಾಟಕ ಬಂದ್: ಡಿಕೆಶಿ