ಕರ್ನಾಟಕ

karnataka

ETV Bharat / state

ಮೈಸೂರು: ಅಂಗನವಾಡಿ ಕಾರ್ಯಕರ್ತೆಯ ಹತ್ಯೆ, ಆರೋಪಿ ಬಂಧನ - ಮೇಟಗಳ್ಳಿ ಠಾಣೆಯ ಪೊಲೀಸರು

ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮೇಟಗಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Anganwadi worker murder in Mysore
ಅಂಗನವಾಡಿ ಕಾರ್ಯಕರ್ತೆಯ ಹತ್ಯೆ, ಆರೋಪಿ ಬಂಧನ

By

Published : May 26, 2023, 3:15 PM IST

ಮೈಸೂರು:ಹಣಕಾಸಿನ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ, ಅಂಗನವಾಡಿ ಕಾರ್ಯಕರ್ತೆಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ ಘಟನೆ, ಮೈಸೂರು ಹೊರ ವಲಯದ ಬೆಂಗಳೂರು ಹೆದ್ದಾರಿ ಪಕ್ಕದಲ್ಲಿ ಇರುವ ಸಿದ್ದಲಿಂಗಪುರದಲ್ಲಿ ನಡೆದಿದೆ. ಬುಧವಾರ ಅಂಗನವಾಡಿ ಕಾರ್ಯಕರ್ತೆಯನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಹತ್ಯೆಯ ಆರೋಪಿಯನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಬುಧವಾರ ಸಂಜೆ ಮೈಸೂರು- ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿ ಇರುವ ಸಿದ್ದಲಿಂಗಪುರ ಗ್ರಾಮದಲ್ಲಿ ಇರುವ ಬೇಕರಿಯೊಂದರಲ್ಲಿ, ಅಂಗನವಾಡಿ ಕಾರ್ಯಕರ್ತೆಯನ್ನು ಕಬ್ಬಿಣದ ಸಲಾಕೆಯಿಂದ ಬರ್ಬರವಾಗಿ ಕೊಲೆ ಮಾಡಿ, ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ನಗರದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಕಳೆದ ರಾತ್ರಿ ಹತ್ಯೆಯ ಆರೋಪಿ ಮೋಹನ್ (26) ಅವರನ್ನು ‌ಪೊಲೀಸರು ಬಂಧಿಸಿದ್ದಾರೆ.

ಕೊಲೆಯ ವಿವರ:ಹತ್ಯೆಯಾದ ಅಂಗನವಾಡಿ ಕಾರ್ಯಕರ್ತೆ ಮಮತಾಳನ್ನು ಕಳೆದ ಬುಧವಾರ ಸಂಜೆ ಕೊಲೆ ಮಾಡಿ ಪರಾರಿಯಾಗಿದ್ದ ಮೋಹನ್ ಎಂಬಾತನನ್ನು ಬಂಧಿಸಿ ವಿಚಾರಣೆ ಕೈಗೊಂಡಾಗ, ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಕೊಲೆಗೆ ಕಾರಣ ತಿಳಿಸಿದ್ದಾನೆ. ಕಳೆದ ಮೂರು ವರ್ಷಗಳಿಂದ ಸಿದ್ದಲಿಂಪುರದ ಹೆದ್ದಾರಿಯ ಪಕ್ಕದಲ್ಲಿ ಬೇಕರಿ ನಡೆಸುತ್ತಿದ್ದ ಅದೇ ಗ್ರಾಮದ ಮೋಹನ್ ಎಂಬಾತ, ಪಾಂಡವಪುರ ತಾಲೂಕಿನ ಕೆರೆತಣ್ಣೂರು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಮಮತಾಳೊಂದಿಗೆ ಸಂಪರ್ಕ ಹೊಂದಿದ್ದನು. ಆಕೆ ಚೀಟಿ ವ್ಯವಹಾರ ನಡೆಸುತ್ತಿದ್ದು, ಈತನಿಗೆ ಹಣಕಾಸು ಸಹಾಯ ಮಾಡಿದ್ದರು. ಆಕೆ ಈತನೊಂದಿಗೆ ಬೇಕರಿಯಲ್ಲಿಯೇ ಬಂದು ವ್ಯಾಪಾರ ನಡೆಸುತ್ತ ಜೊತೆಯಲ್ಲಿಯೇ ಇರುತ್ತಿದ್ದರು ಎನ್ನಲಾಗಿದೆ.

ಹಣಕಾಸು ವಿಚಾರಕ್ಕೆ ಗಲಾಟೆ:ಬುಧವಾರ ಸಂಜೆ ಬೇಕರಿಗೆ ಬಂದ ಮಮತಾ ಮೋಹನ್​ನೊಂದಿಗೆ ಹಣಕಾಸು ವಿಚಾರಕ್ಕೆ ಗಲಾಟೆ ನಡೆಸಿದ್ದಾರೆ. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು, ಬೇಕರಿ ತಿನಿಸುಗಳನ್ನು ಮಾಡಲು ಬಳಸುತ್ತಿದ್ದ ಕಬ್ಬಿಣದ ಸಲಾಕೆಯಿಂದ ಮಮತಾಳ ತಲೆಗೆ ಹೊಡೆದಿದ್ದು, ಸ್ಥಳದಲ್ಲೇ ಮಮತಾ ಮೃತಪಟ್ಟಿದ್ದಾರೆ. ತಕ್ಷಣ ಆರೋಪಿ ಪರಾರಿಯಾಗಿದ್ದು, ಈತನನ್ನು ಕಳೆದ ರಾತ್ರಿ ಮೇಟಗಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೆಂಡತಿಯ ಅನೈತಿಕ ಸಂಬಂಧ - ಮನನೊಂದ ಗಂಡ ಆತ್ಮಹತ್ಯೆಗೆ ಶರಣು: ಇನ್ನೊಂದು ಕಡೆ ಮೈಸೂರು ಜಿಲ್ಲೆಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಹೆಂಡತಿಯ ಅನೈತಿಕ ಸಂಬಂಧಕ್ಕೆ ಮನನೊಂದು, ಗಂಡನೇ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಮೈಸೂರು ತಾಲೂಕಿನ ಹಳ್ಳಿಕೆರೆಹುಂಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಶಿಧರ ಎಂಬ ವ್ಯಕ್ತಿ, ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದಾನೆ. ಈತ ಕಳೆದ ಹತ್ತು ವರ್ಷಗಳ ಹಿಂದೆ ಭವ್ಯ ಎಂಬುವವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳು ಸಹ ಇದ್ದರು. ಹೆಂಡತಿ ಬೇರೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿದ್ದು, ಈ ಬಗ್ಗೆ ಹಲವರು ಹೆಂಡತಿಗೆ ಬುದ್ಧಿವಾದ ಹೇಳಿದ್ದರು. ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳದ ಹೆಂಡತಿ ಹಾಗೂ ಅಕ್ಕಪಕ್ಕದವರ ಚುಚ್ಚು ಮಾತಿಗೆ ಮನನೊಂದ ಶಶಿಧರ, ಮನೆಯಲ್ಲಿಯೇ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ವರುಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಮ್ಯಾಟ್ರಿಮೋನಿ ನಂಟು, 2 ವರ್ಷದಿಂದ ಸಂಬಂಧ: ಯುವಕನ ವಿರುದ್ಧ ಯುವತಿ ದೂರು

ABOUT THE AUTHOR

...view details