ಅಮಿತ್ ಶಾ ನನ್ನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು : ಎಸ್ ಎ.ರಾಮದಾಸ್ ಮೈಸೂರು :ನನ್ನ ನಿರ್ಧಾರದ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದರು. ಮೈಸೂರು ಏರ್ಪೋರ್ಟ್ ನಲ್ಲಿ ಸ್ವಾಗತ ಮಾಡುವಾಗ ನನ್ನನ್ನು ಆತ್ಮೀಯವಾಗಿ ಅಪ್ಪಿಕೊಂಡು ಮಾತನಾಡಿಸಿದರು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆ ಆರ್ ಕ್ಷೇತ್ರದ ಟಿಕೆಟ್ ವಂಚಿತ ಹಾಲಿ ಶಾಸಕ ಎಸ್ ಎ ರಾಮದಾಸ್ ಹೇಳಿದರು.
ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲು ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಅವರನ್ನು ಸ್ವಾಗತಿಸಲು ಎಸ್ ಎ ರಾಮದಾಸ್ ಸೇರಿದಂತೆ ಹಲವು ಬಿಜೆಪಿ ನಾಯಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಮಿತ್ ಶಾ ಅವರು ವಿಮಾನ ನಿಲ್ದಾಣದಲ್ಲಿ ರಾಮದಾಸ್ ಅವರನ್ನು ಆತ್ಮೀಯವಾಗಿ ಮಾತನಾಡಿಸಿದರು. ಬಳಿಕ ರಾಮದಾಸ್ ಅವರು ಅಮಿತ್ ಶಾ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಮದಾಸ್, ಅಮಿತ್ ಶಾ ತಮ್ಮ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾವು ಹೇಗಿದ್ದೀರಿ ಎಂದು ಕುಶಲೋಪರಿ ವಿಚಾರಿಸಿದರು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಹಾಗೂ ಬಿಜೆಪಿ ನಡುವೆ ಸುಮಾರು 25 ವರ್ಷಗಳಿಗೂ ಅಧಿಕ ಸಮಯದ ಸಂಬಂಧ ಇದೆ. ನನಗೆ ಟಿಕೆಟ್ ತಪ್ಪಿದಾಗ ಎರಡು ಅವಕಾಶಗಳಿತ್ತು. ಒಂದು ಸ್ವತಂತ್ರವಾಗಿ ಸ್ಪರ್ಧೆ ಮಾಡುವುದು, ಇನ್ನೊಂದು ವಿಶ್ವ ನಾಯಕನ ಸಂಬಂಧ ಉಳಿಸಿಕೊಳ್ಳುವುದು. ಹಾಗಾಗಿ ನಾನು ಕಾರ್ಯಕರ್ತರ ಮನವೊಲಿಸಿ ವಿಶ್ವ ನಾಯಕನ ಸಂಬಂಧ ಉಳಿಸಿಕೊಳ್ಳಲು ಮುಂದಾದೆ. ಅದರಂತೆ ಈಗಲೂ ಕೆಲಸ ಮಾಡುತ್ತಿದ್ದೇನೆ. ನನಗೆ ಟಿಕೆಟ್ ಯಾಕೆ ಕೈ ತಪ್ಪಿತು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ ಎಂದು ಇದೇ ವೇಳೆ ಹೇಳಿದರು.
ಇದನ್ನೂ ಓದಿ :ಚಾಣಕ್ಯನ ಮಿಂಚಿನ ಸಂಚಾರ: ಕೈಪಡೆ ವಿರುದ್ಧ ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಶಾ