ಮೈಸೂರು: ಹೆಚ್.ಡಿ.ಕೋಟೆಯಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ಮೂವರನ್ನು ಬಂಧಿಸಿದ್ದಾರೆ. 25 ಕೋಟಿ ರೂಪಾಯಿ ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕೇರಳ ರಾಜ್ಯದ ಕೊಚ್ಚಿನ್ ಸಮುದ್ರದಿಂದ ಅಂಬರ್ ಗ್ರೀಸ್ ಸಂಗ್ರಹಿಸಿ ಮೈಸೂರಿನ ಹೆಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ಬಳಿ ತಂದು ಮಾರಾಟ ಮಾಡಲು ಯತ್ನಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಹೆಚ್.ಡಿ.ಕೋಟೆ ಹಾಗೂ ಜಿಲ್ಲಾ ಸೆನ್ (CEN) ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಕೇರಳ ಮೂಲದ ಇಬ್ಬರು ಹಡಗು ನಡೆಸುವ ನಾವಿಕರು ಸೇರಿದಂತೆ ಮೂವರನ್ನು ಸೆರೆ ಹಿಡಿದಿದ್ದಾರೆ. ಒಂದು ಕಾರನ್ನು ಜಪ್ತಿ ಮಾಡಲಾಗಿದೆ.
ಅಂಬರ್ ಗ್ರೀಸ್- ಖಚಿತಪಡಿಸಿದ ಅರಣ್ಯ ಇಲಾಖೆ:ಮೂವರು ಆರೋಪಿಗಳು ಮಾರಾಟ ಮಾಡಲು ಯತ್ನಿಸುತ್ತಿದ್ದ ಈ ವಸ್ತು ತಿಮಿಂಗಿಲದ ಅಂಬರ್ ಗ್ರೀಸ್ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂಬರ್ ಗ್ರೀಸ್ಗೆ ದೇಶ, ವಿದೇಶದಲ್ಲಿ ಅಧಿಕ ಬೇಡಿಕೆ ಇದೆ. ಹೆಚ್.ಡಿ.ಕೋಟೆ ಪೊಲೀಸರು ವಶಪಡಿಸಿಕೊಂಡ ಅಂಬರ್ ಗ್ರೀಸ್ ಸರಿಸುಮಾರು 25 ಕೋಟಿ ರೂ ಬೆಲೆ ಬಾಳುತ್ತದೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.