ಮೈಸೂರು:ನರೇಂದ್ರ ಮೋದಿ ಅವರಿಗೆ ಪ್ರಧಾನಿ ಹುದ್ದೆ ಸಿಗಲು ಡಾ. ಅಂಬೇಡ್ಕರ್ ಅವರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು. ನಗರದ ಲಲಿತ್ ಮಹಲ್ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿರುವ ಯಾರೂ ಪರಿವಾರವಾದದಿಂದ ಜನಪ್ರತಿನಿಧಿ ಆದವರಲ್ಲ. ಸ್ವಂತ ಪರಿಶ್ರಮದಿಂದ ಮತ್ತು ಕುಟುಂಬದ ಬೆಂಬಲ ಇಲ್ಲದೆ ಜನಪ್ರತಿನಿಧಿ ಆಗಲು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಮೋದಿ ಪ್ರಧಾನಿಯಾಗಲು ಅಂಬೇಡ್ಕರ್ ಕಾರಣ :ಬಾಬಾ ಸಾಹೇಬರು ಬರೆದ ಸಂವಿಧಾನದ ಕಾರಣಕ್ಕಾಗಿ ನಾನು ಲೋಕಸಭಾ ಸದಸ್ಯನಾಗಲು ಸಾಧ್ಯವಾಗಿದೆ. ಮೈಸೂರು ಸಮಗ್ರ ಅಭಿವೃದ್ಧಿಗೆ ಒಡೆಯರ್ ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಅದೇ ರೀತಿ ದೇಶವನ್ನು ಸರ್ವತೋಮುಖ ಅಭಿವೃದ್ಧಿಯಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಹುದ್ದೆ ಸಿಗಲು ಡಾ. ಅಂಬೇಡ್ಕರ್ ಅವರೇ ಕಾರಣ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಮರೆತಿತ್ತು:ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಮರೆತಿತ್ತು. ಅದುವೇ ಇಂದು ಕಾಂಗ್ರೆಸ್ ಪಕ್ಷಕ್ಕೆ ಶಾಪ ಎಂದು ಟೀಕಿಸಿದರು. ಅಂಬೇಡ್ಕರರ ಫೋಟೋ ಇಟ್ಟುಕೊಂಡು ರಾಜಕಾರಣ ಮಾಡಿದರು. ಅವರು ಲೋಕಸಭೆಗೆ ಹೋಗದಂತೆ ನೋಡಿಕೊಂಡರು. ಅವರನ್ನು ಅಗೌರವದಿಂದ ನಡೆಸಿಕೊಂಡರು. ಆದರೆ, ಮೋದಿ ಅವರು ಪಂಚತೀರ್ಥಗಳ ಅಭಿವೃದ್ಧಿ ಮಾಡಿ ನ್ಯಾಯ ಕೊಡುವ ಕಾರ್ಯ ಮಾಡಿದ್ದಾರೆ. ರಾಜ್ಯದಲ್ಲಿ ಎಸ್ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಉತ್ತಮ ಸಂಘಟನೆ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ, ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಿವಿಧ ರಾಜ್ಯಗಳ ಪದಾಧಿಕಾರಿಗಳು, ರಾಜ್ಯದ ಪದಾಧಿಕಾರಿಗಳು ಭಾಗವಹಿಸಿದ್ದರು.