ಮೈಸೂರು:ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಗಜಪಡೆಗಳು ತಾಲೀಮು ಆರಂಭಿಸಿದ್ದು, ಇಂದಿನಿಂದ ಅಭಿಮನ್ಯು ಆನೆಗೆ 750 ಕೆಜಿ ತೂಕದ ಭಾರ ಹೊರುವ ತಾಲೀಮು ಆರಂಭಿಸಲಾಯಿತು.
ಇದರಲ್ಲಿ 280 ಕೆಜಿ ತೂಕದ ಮರದ ಅಂಬಾರಿ, ಗಾದಿ, ಮರಳಿನ ಮೂಟೆ ಸೇರಿದಂತೆ 750 ಕೆಜಿ ತೂಕದ ಭಾರವನ್ನು ಅಭಿಮನ್ಯುವಿನ ಮೇಲೆ ಹಾಕಿ, ಅರಮನೆ ಮುಂಭಾಗದಿಂದ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಅಭಿಮನ್ಯು, ಕುಮ್ಕಿ ಆನೆಗಳಾದ ಚೈತ್ರಾ ಮತ್ತು ಲಕ್ಷ್ಮಿ ಅದರ ಹಿಂದೆ ಅರ್ಜುನ, ಗೋಪಾಲಸ್ವಾಮಿ, ಮಹೇಂದ್ರ, ಭೀಮ, ಕಾವೇರಿ, ಧನಂಜಯ ಆನೆಗಳು ಸಾಗಿದವು.
ಈ ಬಾರಿ ವಿಜಯ ದಶಮಿಯ ದಿನ ಜಂಬೂಸವಾರಿ ಸಂಜೆ ವೇಳೆಯಲ್ಲಿ ಬಂದಿರುವ ಕಾರಣ, ಮರದ ಅಂಬಾರಿಯನ್ನು ಸಂಜೆ ಕಟ್ಟಿ, ತಾಲೀಮು ಆರಂಭಿಸಿದ್ದು,ಜಂಬೂಸವಾರಿಯ ದಿನ ಸಂಜೆ ವಾತಾವರಣಕ್ಕೆ ಹೊಂದಿಕೊಳ್ಳಲು ಈ ರೀತಿ ಮಾಡಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ವಿವರಿಸಿದರು.
ಮರದ ಅಂಬಾರಿ ಹೊತ್ತ ಅಭಿಮನ್ಯು ಆನೆ ಜೊತೆ ಕುಮ್ಕಿ ಆನೆಗಳು ಸಾಥ್ ನೀಡಿದರೆ ಅದರ ಜೊತೆ ಇತರ ಆನೆಗಳು ಅಶ್ವದಳ ತಾಲೀಮಿನಲ್ಲಿ ಭಾಗವಹಿಸಿದ್ದು, ಅರಮನೆಯಿಂದ ಸಾಗಿ ಕೆ.ಆರ್ ಸರ್ಕಲ್, ಸಯಾಜಿ ರಾವ್ ವೃತ್ತ, ಆಯುರ್ವೇದಿಕ್ ಸರ್ಕಲ್ ಮೂಲಕ ಬನ್ನಿ ಮಂಟಪದ ವರೆಗೆ ಮರದ ಅಂಬಾರಿ ಹೊತ್ತ ಜಂಬೂಸವಾರಿಯ ಕ್ಯಾಪ್ಟನ್ ಅಭಿಮನ್ಯು ಸಾಗಿತು.
ಇದನ್ನೂ ಓದಿ:ಮೈಸೂರು ದಸರಾ 2022: ಗಣೇಶ ಹಬ್ಬದ ನಿಮಿತ್ತ ಗಜಪಡೆಗೆ ವಿಶೇಷ ಪೂಜೆ