ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಅಂಬಾರಿ ಡಬಲ್ ಡೆಕ್ಕರ್ ಬಸ್​ಗೆ ಹೆಚ್ಚಿದ ಬೇಡಿಕೆ..

ವಾಹನ ದಟ್ಟಣೆ ಕಾರಣದಿಂದಾಗಿ ಹಾಗೂ ಕೆಲವೆಡೆ ಏಕಮುಖ ಸಂಚಾರ ನಿರ್ಬಂಧವಿರುವ ಕಾರಣ ರಸ್ತೆಯ ಪರಿಚಯವಿಲ್ಲದ ಬಹುತೇಕ ಪ್ರವಾಸಿಗರು ಅಂಬಾರಿ ಡಬಲ್ ಡೆಕ್ಕರ್ ಬಸ್​ನಲ್ಲಿ ಸಂಚರಿಸಲು ಒತ್ತು ನೀಡುತ್ತಿದ್ದಾರೆ..

ambari-double-decker-bus
ಅಂಬಾರಿ ಡಬಲ್ ಡೆಕ್ಕರ್ ಬಸ್

By

Published : Oct 20, 2021, 7:01 PM IST

ಮೈಸೂರು :ದಸರಾ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳು ಬಂದಿವೆ. ಅಲ್ಲದೇ, ನಗರದ ದೀಪಾಲಂಕಾರದಲ್ಲಿ ಪಾರಂಪರಿಕ ಕಟ್ಟಡಗಳನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದ ಅಂಬಾರಿ ಬಸ್​ಗೆ ಬೇಡಿಕೆ ಹೆಚ್ಚಾಗಿದೆ. ಆ ಮೂಲಕ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದೆ.

ಈ ಬಾರಿ ದಸರಾವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಯಿತಾದರೂ ಅದ್ದೂರಿಯಾಗಿ ದೀಪಾಲಂಕಾರ ಮಾಡಿದ ಕಾರಣಕ್ಕಾಗಿ ಪ್ರವಾಸಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಅಲ್ಲದೇ, ದಸರಾ ನಂತರ ಕೂಡ ದೀಪಾಲಂಕಾರ ವಿಸ್ತರಣೆ ಮಾಡಲಾಗಿರುವುದರಿಂದ ಸಾವಿರಾರು ಮಂದಿ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಅಂಬಾರಿ ಬಸ್​ಗೆ ಬೇಡಿಕೆ ಹೆಚ್ಚಾಗಿದ್ದು, ನೂಕು ನುಗ್ಗಲು ಉಂಟಾಗಿದೆ.

ಬೇರೆ ಜಿಲ್ಲೆಗಳಿಂದ ಪ್ರವಾಸಕ್ಕೆಂದು ಮೈಸೂರಿಗೆ ಆಗಮಿಸುವವರು ಹಗಲಿನಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ನೋಡಿಕೊಂಡು ಸಂಜೆ ನಂತರ ಮಕ್ಕಳೊಂದಿಗೆ ವಿದ್ಯುತ್ ದೀಪಾಲಂಕಾರ ನೋಡಲು ಹಾತೊರೆಯುತ್ತಿದ್ದಾರೆ.

ವಾಹನ ದಟ್ಟಣೆ ಕಾರಣದಿಂದಾಗಿ ಹಾಗೂ ಕೆಲವೆಡೆ ಏಕಮುಖ ಸಂಚಾರ ನಿರ್ಬಂಧವಿರುವ ಕಾರಣ ರಸ್ತೆಯ ಪರಿಚಯವಿಲ್ಲದ ಬಹುತೇಕ ಪ್ರವಾಸಿಗರು ಅಂಬಾರಿ ಡಬಲ್ ಡೆಕ್ಕರ್ ಬಸ್​ನಲ್ಲಿ ಸಂಚರಿಸಲು ಒತ್ತು ನೀಡುತ್ತಿದ್ದಾರೆ.

ಪ್ರತಿ ದಿನ ಸಂಜೆ 6.30ರ ನಂತರ ಟ್ರಿಪ್​ಗಳಿಗೆ ಭಾರಿ ಬೇಡಿಕೆ ಇದೆ. ಬೆಳಗ್ಗೆ 9 ಗಂಟೆಗೆ ಅಂಬಾರಿ ಬಸ್ ಟಿಕೆಟ್‌ಗಳು ಮಾರಾಟವಾಗುತ್ತಿವೆ. 5 ಅಂಬಾರಿ ಬಸ್‌ಗಳನ್ನು ಓಡಿಸುತ್ತಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಒಂದೊಂದು ಟ್ರಿಪ್​ನಲ್ಲೂ 20 ರಿಂದ 30 ಮಂದಿಯನ್ನು ಕರೆದೊಯ್ದು ದೀಪಾಲಂಕಾರ ಮತ್ತು ಪಾರಂಪರಿಕ ಕಟ್ಟಡಗಳ ದರ್ಶನ ಮಾಡಿಸುತ್ತಿದೆ. ಆದರೆ, ಎಲ್ಲರೂ ರೂಟ್ ಟಾಪ್​ನಲ್ಲಿ ಮಾತ್ರ ಸಂಚರಿಸಲು ಆಸಕ್ತಿ ತೋರುತ್ತಿರುವುದರಿಂದ ಅಲ್ಲಿಯ ಸಾಮರ್ಥ್ಯಕ್ಕಿಂತ ಹೆಚ್ಚು ಟಿಕೆಟ್ ಕೇಳಿ ಪಡೆಯುತ್ತಿದ್ದು, ನಿಂತುಕೊಂಡೇ ಪ್ರಯಾಣ ಮಾಡುತ್ತಿದ್ದಾರೆ.

10 ದಿನಗಳಲ್ಲಿ ಅಂಬಾರಿ ಬಸ್​ನ ಪ್ರಯಾಣಿಕರ ವಿವರ : ಅ.7ರಂದು 186, ಅ.8 ರಂದು 259, ಅ.9 ರಂದು 266, ಅ.10 ರಂದು 302, ಅ.11 ರಂದು 296, ಅ.12 ರಂದು 302, ಅ.13 ರಂದು 295, ಅ.14 ರಂದು 303, ಅ.15 ರಂದು 305, ಅ.16 ರಂದು 386 ಹಾಗೂ ಅ.17 ರಂದು 446.

ಚೇತರಿಸಿಕೊಂಡ ವಹಿವಾಟು :ಆಯುಧಪೂಜೆ, ವಿಜಯದಶಮಿ, ಭಾನುವಾರ, ಈದ್ ಮಿಲಾದ್, ವಾಲ್ಮೀಕಿ ಜಯಂತಿ ಸೇರಿ ಹಲವು ದಿನ ಸಾಲು ಸಾಲು ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಬರುತ್ತಿರುವುದರಿಂದ ವಾಣಿಜ್ಯ ವಹಿವಾಟು ಕೂಡ ಚೇತರಿಸಿಕೊಳ್ಳುತ್ತಿದೆ.

ಓದಿ:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ನಾಳೆ ಶಿಕ್ಷಕರಿಂದ ಕಪ್ಪು ಪಟ್ಟಿ ಧರಿಸಿ ಪಾಠ..

ABOUT THE AUTHOR

...view details