ಮೈಸೂರು: ಮೈತ್ರಿ ಬಗ್ಗೆ ಚರ್ಚೆಯೇ ಆಗಿಲ್ಲ. ಯಾರು ಮೈತ್ರಿಗೆ ಮುಂದೆ ಬಂದಿಲ್ಲ. ಆದ್ದರಿಂದ ಯಾರ ಜೊತೆ ಮೈತ್ರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಭಾನವಾರ ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶಿರ್ವಾದ ಪಡೆದ ನಂತರ ಮಾಧ್ಯಮಗಳ ಜೊತೆ ಹೆಚ್ಡಿಕೆ ಮಾತನಾಡಿದರು. ಮುಂದೆ ಲೋಕಸಭೆ ಸೇರಿದಂತೆ ಇತರ ಚುನಾವಣೆಗಳು ಬರುತ್ತಿದ್ದು, ರಾಜಕೀಯ ಪಕ್ಷವಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ಶಾಸಕ ಜಿ ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ರಚನೆ ಮಾಡಿದ್ದೇವೆ. ಅವರ ನೇತೃತ್ವದಲ್ಲಿ ನಾಲ್ಕು ತಂಡ ರಾಜ್ಯದ ಪ್ರವಾಸ ಮಾಡುತ್ತದೆ. ಇದು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತದೆ. ಮುಂದಿನ ಚುನಾವಣೆಯಲ್ಲಿ ಯಾರ ಜೊತೆಯೂ ಮೈತ್ರಿಯ ಚರ್ಚೆಯೇ ಆಗಿಲ್ಲ. ಯಾರು ಮೈತ್ರಿಗೆ ಮುಂದೆ ಬಂದಿಲ್ಲ. ಆದ್ದರಿಂದ ಯಾರ ಜೊತೆಯೂ ಮೈತ್ರಿ ಇಲ್ಲ. ಮುಂಬರುವ ಚುನಾವಣೆಗಾಗಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗಾಗಿ ಮಾಡಿದ ಸಾಲ ತಿರಿಸುವವರು ಯಾರು :ಗ್ಯಾರಂಟಿ ಯೋಜನೆಗಳಿಗಾಗಿ 86 ಸಾವಿರ ಕೋಟಿ ಸಾಲ ಮಾಡಲಾಗಿದ್ದು, ಈಗ ಮಾಡಿದ ಸಾಲಗಳನ್ನು ತೀರಿಸುವವರು ಯಾರು? ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ. 200 ಯುನಿಟ್ ವಿದ್ಯುತ್ ಉಚಿತ ಎಂದಿದ್ದರು. ಈಗ ಕಂಡಿಷನ್ ಮೇಲೆ ಕಂಡಿಷನ್ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಕಾರಣಕ್ಕಾಗಿ ಅಭಿವೃದ್ಧಿಯೇ ನಿಂತು ಹೋಗಿದೆ. ಶಾಸಕರಿಗೆ ಅನುದಾನ ಸಿಗುತ್ತಿಲ್ಲ. ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ನೋಡುತ್ತಿರಿ ಎಂದು ಮಾರ್ಮಿಕವಾಗಿ ಹೆಚ್ಡಿಕೆ ಹೇಳಿದರು.