ಮೈಸೂರು: ರಾಜ್ಯದ ಪ್ರತಿಷ್ಠಿತ ಮಠವೊಂದರ ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿನಿಯರಿಗೆ ಸ್ವಾಮೀಜಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಒಡನಾಡಿ ಮಹಿಳಾ ಮತ್ತು ಮಕ್ಕಳ ವಸತಿ ಕೇಂದ್ರದ ಸಿಬ್ಬಂದಿ ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿನಿಯರ ಜೊತೆ ಸಮಾಲೋಚನೆ ನಡೆಸಿ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದಾರೆ.
ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಮಠ ನಡೆಸುತ್ತಿರುವ ಶಾಲೆಯಲ್ಲೇ ಈ ವಿದ್ಯಾರ್ಥಿನಿಯರು ಓದುತ್ತಿದ್ದಾರೆ ಮತ್ತು ಮಠದ ಉಚಿತ ಹಾಸ್ಟೆಲ್ನಲ್ಲೇ ವಸತಿ ಪಡೆದಿದ್ದರು. ಈ ಸಂದರ್ಭದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ ಎಂದು ದೂರಲಾಗಿದೆ. ಇದೇ ವೇಳೆ, ಕಿರುಕುಳ ಪ್ರಶ್ನೆ ಮಾಡಿದ್ದಕ್ಕೆ ಹಾಸ್ಟೆಲ್ನಿಂದ ಹೊರ ಹಾಕಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಹಾಸ್ಟೆಲ್ನಿಂದ ಹೊರ ಹಾಕಿದ ಬಳಿಕ ಮನೆಗೆ ಹೋಗದೆ ಬೆಂಗಳೂರಿನ ತಮ್ಮ ಸಂಬಂಧಿಕರ ಮನೆಗೆ ಹೋಗಲು ನಿರ್ಧರಿಸಿ ಬೆಂಗಳೂರಿಗೆ ಹೋದಾಗ ಅಲ್ಲಿ, ಆಟೋ ಚಾಲಕನಿಗೆ ಈ ಬಗ್ಗೆ ಮಾಹಿತಿ ನೀಡಿದೆವು. ಆಗ ಕಾಟನ್ ಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದ. ಅಲ್ಲಿ ಪೊಲೀಸರು ನಮ್ಮನ್ನು ಪೋಷಕರ ಬಳಿ ಕಳುಹಿಸಿಕೊಟ್ಟರು. ಬಳಿಕ ಮಾಹಿತಿ ಅರಿತ ಪೋಷಕರು ಸ್ಥಳೀಯ ಜನಪ್ರತಿನಿಧಿಯ ಮುಂದೆ ಅಳಲು ತೋಡಿಕೊಂಡಿದ್ದರು. ಆ ಬಳಿಕ ಅವರು ನಮ್ಮನ್ನು ಒಡನಾಡಿ ಸಂಸ್ಥೆಗೆ ಕಳುಹಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ಸಮಾಲೋಚನೆ ವೇಳೆ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟಾಲಿನ್, ಇದೊಂದು ಸೂಕ್ಷ್ಮ ಹಾಗೂ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಗೆ ಸಂಬಂಧಿಸಿದ ಪ್ರಕರಣ. ಆದ್ದರಿಂದ ಎಲ್ಲ ವಿಚಾರಗಳ ಮಾಹಿತಿ ಬಗ್ಗೆ ನೀಡಲು ಸಾಧ್ಯವಿಲ್ಲ. ಆದರೆ, ಈ ಪ್ರಕರಣ ಪೋಕ್ಸೋ ಕಾಯ್ದೆ ವ್ಯಾಪ್ತಿಯಲ್ಲಿ ಬರುವುದರಿಂದ ವಿಳಂಬ ಮಾಡದೇ ಬಾಲಕಿಯರು ನಮ್ಮ ಬಳಿ ಬಂದ ತಕ್ಷಣ ಸಮಾಲೋಚನೆ ನಡೆಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮಾಹಿತಿ: ಈಆರೋಪದ ಬಗ್ಗೆ ಮೈಸೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಚೇತನ್ಗೆ ಮಾಹಿತಿ ನೀಡಲಾಗಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ಮತ್ತೊಬ್ಬ ನಿರ್ದೇಶಕ ಪರಶುರಾಮ ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಮಧ್ಯೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಚಂದ್ರಕುಮಾರ್ ನೀಡಿದ ದೂರಿನ ಅನ್ವಯ ಮೈಸೂರಿನ ಠಾಣೆಯೊಂದರಲ್ಲಿ ಐವರ ವಿರುದ್ಧ ಪೋಕ್ಸೋ ಪ್ರಕರಣದ ಅಡಿ ಎಫ್ಐಆರ್ ದಾಖಲಾಗಿದೆ.