ಮೈಸೂರು:ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದ ಹೊಸದರಲ್ಲಿ ತಾತ್ಕಾಲಿಕವಾಗಿ ಎಟಿಐ ಗೆಸ್ಟ್ ಹೌಸ್ನಲ್ಲಿ ವಾಸವಾಗಿದ್ದ ಈ ಹಿಂದೆ ಮೈಸೂರು ಡಿಸಿ ಆಗಿದ್ದ ರೋಹಿಣಿ ಸಿಂಧೂರಿ, ಅಧಿಕೃತ ಬಂಗಲೆಗೆ ಸ್ಥಳಾಂತರವಾಗುವಾಗ ಎಟಿಐನ ಪಾರಂಪರಿಕ 20 ಪೀಠೋಪಕರಣಗಳು ಸೇರಿಕೊಂಡಿರಬಹುದಾಗಿದ್ದು, ಅವುಗಳನ್ನು ವಾಪಸ್ ಹಿಂದಿರುಗಿಸುವಂತೆ ಎಟಿಐನ ನಿರ್ದೇಶಕರು ಈಗಿನ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಅಂದರೆ 2020ರ ಅಕ್ಟೋಬರ್ 2 ರಿಂದ ನವೆಂಬರ್ 14ರ ವರೆಗೆ ಟಿ ನರಸೀಪುರ ರಸ್ತೆಯಲ್ಲಿರುವ ಎಟಿಐ ಅಂದರೆ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸವಾಗಿದ್ದರು.
ಇದನ್ನೂ ಓದಿ:ಲಕ್ಕಿ ಅಲಿ ವಿರುದ್ಧ ಕಾನೂನು ಕ್ರಮ: ರೋಹಿಣಿ ಸಿಂಧೂರಿ
2020 ರ ನವೆಂಬರ್ 14ರಂದು ಎಟಿಐ ಅತಿಥಿ ಗೃಹವನ್ನು ತೆರವು ಮಾಡುವಾಗ 2 ಟೆಲಿಫೋನ್ ಟೇಬಲ್, 2 ಕ್ಲಾತ್ ಹ್ಯಾಂಗ್ಲಾರ್ಸ್, 2 ಬೆತ್ತದ ಚೇರ್ಸ್, 2 ಟೆಲಿಫೋನ್ ಸ್ಟೂಲ್, 2 ಟಿಪಾಯಿ, 1 ಮೈಕ್ರೋ ಓವನ್, 1 ರಿಸೆಪ್ಷನ್ ಟೆಲಿಫೋನ್ ಸ್ಟೂಲ್, 1 ಮಂಚ, 1 ಹಾಸಿಗೆ, 2 ಪ್ಲಾಸ್ಟಿಕ್ ಸ್ಟೂಲ್, 2 ಯೋಗ ಮ್ಯಾಟ್ ಮತ್ತು 2 ಸ್ಟೀಲ್ ವಾಟರ್ ಜಗ್ ಸೇರಿದಂತೆ 20 ಸಾಮಗ್ರಿಗಳು ಸ್ಥಳಾಂತರದ ವೇಳೆ ಸೇರಿಕೊಂಡಿರಬಹುದು. ಈ ಸಾಮಗ್ರಿಗಳು ಅಧಿಕೃತ ಜಿಲ್ಲಾಧಿಕಾರಿ ವಸತಿ ಗೃಹದಲ್ಲಿ ಇದ್ದರೆ, ಕೂಡಲೇ ವಾಪಸ್ ಆಡಳಿತ ತರಬೇತಿ ಸಂಸ್ಥೆಗೆ ನೀಡಬೇಕು. ಇಲ್ಲದಿದ್ದರೆ ಈ ಬಗ್ಗೆ ಮಾಹಿತಿಯನ್ನು ನೀಡುವಂತೆ ಸಹ ಎಟಿಐ ಪತ್ರದಲ್ಲಿ ತಿಳಿಸಿದೆ.
ಜಿಲ್ಲಾಧಿಕಾರಿಗಳು ಹೇಳಿದ್ದಿಷ್ಟು:ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಂದಿನ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರನ್ನ ಈಟಿವಿ ಭಾರತ ಸಂಪರ್ಕಿಸಿದಾಗ, ಈ ವಿಚಾರ ನಿನ್ನೆ ನನ್ನ ಗಮನಕ್ಕೆ ಬಂದಿದೆ. ಸಂಪೂರ್ಣ ಮಾಹಿತಿ ಇಲ್ಲ, ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದರು.