ಮೈಸೂರು:ಬೆಂಗಳೂರು ಮತ್ತು ಮೈಸೂರು ಹೈವೇ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ಮಂಡ್ಯ ಮತ್ತು ಮೈಸೂರು ಸಂಸದರು ಭಾಗಿಯಾಗಿದ್ದಾರೆ ಎಂದು ಮಳವಳ್ಳಿ ಜೆಡಿಎಸ್ ಶಾಸಕ ಡಾ. ಕೆ ಅನ್ನದಾನಿ ಗಂಭೀರ ಆರೋಪ ಮಾಡಿದರು.
ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಮೈಸೂರು ಮತ್ತು ಮಂಡ್ಯ ಸಂಸದರು ಈ ಬಗ್ಗೆ ಮಾತನಾಡಬೇಕು. 30 ವರ್ಷದ ಹಿಂದೆ ನಿರ್ಮಾಣವಾಗಿದ್ದ ಹೆದ್ದಾರಿ ರಸ್ತೆ ಇಂದಿಗೂ ಚೆನ್ನಾಗಿದೆ. ಆದರೆ ನೂತನವಾಗಿ ನಿರ್ಮಾಣವಾಗಿರುವ ದಶಪಥ ಹೊಸ ರಸ್ತೆಯ ಟೋಲ್, ಬೈಪಾಸ್, ಅಂಡರ್ ಪಾಸ್ ಹಾಗೂ ಮೇಲ್ಸೇತುವೆಗಳು ಎಲ್ಲವೂ ಕಳಪೆಯಿಂದ ಕೂಡಿವೆ ಎಂದು ವಿವರಿಸಿದರು.
ಕಮಿಷನ್ ಎಂದರೇನು ಗೊತ್ತಿಲ್ಲ:ಸಂಸದೆ ಸುಮಲತಾ ಆಣೆ ಪ್ರಮಾಣಕ್ಕೆ ಪಂಥಾಹ್ವಾನ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಕಮಿಷನ್ ಎಂದರೆ ಏನು ಗೊತ್ತಿಲ್ಲ. ಕಮಿಷನ್ ಪಡೆಯುವವರಿಗೆ ಮಾತ್ರ ಅದರ ಬಗ್ಗೆ ಗೊತ್ತಿರುತ್ತದೆ.
ಇದನ್ನೂ ಓದಿ:ದೆವ್ವ ಕರೆಯುತ್ತಿದೆ ಎಂದು ದೇವಸ್ಥಾನಕ್ಕೆ ಹೋಗಲು ಆಗುತ್ತದೆಯೇ: ಸುಮಲತಾ ವಿರುದ್ಧ ಶಾಸಕ ರವೀಂದ್ರ ತಿರುಗೇಟು
ಈ ಬಗ್ಗೆ ಮತನಾಡುವವರನ್ನೇ ಕೇಳಿ. ಸಂಸದೆ ಸುಮಲತಾ ಸಿನಿಮಾ ರಂಗದಲ್ಲಿ ಹಣ ಬಿಟ್ಟು ಬೇರೆ ಯಾವುದೇ ಹಣ ಮುಟ್ಟಿಲ್ಲ ಎಂದು ಪ್ರಮಾಣ ಮಾಡಲಿ. ಆಮೇಲೆ ನಮ್ಮದನ್ನು ನೋಡೋಣ. ಅವರು ಕರೆದ ತಕ್ಷಣ ನಾವು ಹೋಗಬೇಕೇ?. ಆಣೆ ಪ್ರಮಾಣದ ಬಗ್ಗೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಉತ್ತರ ನೀಡಿದ್ದಾರೆ. ಇದರ ಬಗ್ಗೆ ನಾನು ಉತ್ತರಿಸುವುದಿಲ್ಲ ಎಂದರು.