ಮೈಸೂರು: ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಶಿಕ್ಷಣಕ್ಕೆ ಒತ್ತು ನೀಡಲು ಮತ್ತು ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲು ಮೈಸೂರು ವಿವಿ ಮತ್ತು ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಶೈಕ್ಷಣಿಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಮೈಸೂರು ವಿವಿ ಮತ್ತು ಕರ್ನಾಟಕ ಪೊಲೀಸ್ ಅಕಾಡೆಮಿ ( ಕೆಪಿಎ) ನಡುವೆ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ನ ಶೈಕ್ಷಣಿಕ ಸಭಾಂಗಣದಲ್ಲಿ ವಿವಿಯ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ವಿಪುಲ್ ಕುಮಾರ್ ಅವರು ಒಡಂಬಡಿಕೆಗೆ ಸಹಿ ಮಾಡಿದ್ದಾರೆ.
ಮೈಸೂರು ವಿವಿ ಮತ್ತು ಕೆಪಿಎ ನಡುವೆ ಒಪ್ಪಂದ ಇದೇ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಅವರು, ಕರ್ನಾಟಕ ಸರ್ಕಾರದ ಒಂದು ಮುಖ್ಯ ಸಂಸ್ಥೆಯಾದ ಪೊಲೀಸ್ ಇಲಾಖೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದು ತುಂಬಾ ಸಂತಸದ ವಿಚಾರ. ಪೊಲೀಸರ ಶೈಕ್ಷಣಿಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಈ ಒಪ್ಪಂದವು 10 ವರ್ಷ ಇರಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಈಶ್ವರಪ್ಪ ಬಹಳ ಅಪಾಯಕಾರಿ ಮನುಷ್ಯ.. ಶಿವಮೊಗ್ಗದಲ್ಲಿ ಅವ್ರೇ ಆಹುತಿಯಾಗುವ ಘಟನೆ ನಡೆದಿದೆ.. ಪಿ ವಿ ಮೋಹನ್ ಆರೋಪ
ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾದ ವಿಪುಲ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ವೃತ್ತಿಯನ್ನು ಪ್ರಾರಂಭಿಸಿದ ಮೇಲೆ ಶಿಕ್ಷಣಕ್ಕೆ ಹೆಚ್ಚಾಗಿ ಒತ್ತು ನೀಡುವುದಿಲ್ಲ. ಅದರಲ್ಲೂ ಪೊಲೀಸರು 24 ಗಂಟೆ ಕೆಲಸದ ಒತ್ತಡದಲ್ಲಿ ಇರುತ್ತಾರೆ. ಅವರಿಗೆ ಯಾವಾಗ ಬೇಕಾದರೂ ಕೆಲಸ ಬರಬಹುದು. ಹಾಗಾಗಿ ಶಿಕ್ಷಣದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಮೊದಲ ಬಾರಿಗೆ ಇಂತಹ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಡಿಪ್ಲೊಮಾ, ಸ್ಪೆಷಲೈಜ್ಡ್ ಕೋರ್ಸ್, ಸರ್ಟಿಫಿಕೇಟ್ ಕೋರ್ಸ್, ಸ್ನಾತಕೋತ್ತರ ಕೋರ್ಸ್, ಸ್ನಾತಕ ಹಾಗೂ ಆನ್ಲೈನ್ ಕೋರ್ಸ್ಗಳನ್ನು ಶುರು ಮಾಡಲು ಚಿಂತನೆ ನಡೆಸಲಾಗಿದೆ. ಆದರೆ ಇನ್ನೂ ಯಾವುದೇ ರೂಪುರೇಷೆಗಳು ಸಿದ್ಧವಾಗಿಲ್ಲ ಎಂದರು.
ಅಪರಾಧ ಶಾಸ್ತ್ರ, ಸೈಬರ್ ಕ್ರೈಮ್, ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ಸೈನ್ಸ್ ಸೇರಿದಂತೆ ಅನೇಕ ವಿಷಯಗಳಲ್ಲಿ ಪೊಲೀಸರು ಕೋರ್ಸ್ ಮಾಡಬಹುದಾಗಿದ್ದು, ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೆಪಿಎಗೆ ಬಂದು ಪ್ರಾಯೋಗಿಕ ತರಬೇತಿ ಪಡೆಯಬಹುದು. ಇದರಿಂದ ಮೈಸೂರು ವಿವಿ ಹಾಗೂ ಕೆಪಿಎ ನಡುವೆ ಉತ್ತಮವಾದ ಹಾಗೂ ಅನುಕೂಲಕರವಾದ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.